ಗೋಲ್ಡನ್ ಸ್ಟಾರ್ ಗಣೇಶ್ – ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಬರುತ್ತಿದೆ ಮತ್ತೊಂದು ಸುಂದರ ಚಿತ್ರ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಈ ಹಿಂದೆ ಕೆಲವು ಚಿತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡಿದೆ. ಈಗ ಇದೇ ಕಾಂಬಿನೇಷನ್ ನಲ್ಲಿ ” ಬಾನ ದಾರಿಯಲ್ಲಿ” ಚಿತ್ರ ಬರುತ್ತಿದೆ.
ಸ್ಪೋರ್ಟ್ಸ್ ಜಾನರ್ ನ ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪ್ರಸ್ತುತ ಈ ಚಿತ್ರಕ್ಕೆ ಮಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ವಾಟರ್ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ಮೂರನೇ ಹಂತದ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ತೆರಳಲಿದೆ.
ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದ ಕಥೆ ಪ್ರೀತಾ ಜಯರಾಂ ಅವರದು. ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.
ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಬಾನ ದಾರಿಯಲ್ಲಿ” ಚಿತ್ರದ ತಾರಾಬಳಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಶ್ಮಾ ನಾಣಯ್ಯ, ರಂಗಾಯಣ ರಘು ಮುಂತಾದವರಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಹಾಡೊಂದರ ಸಾಲು ಚಿತ್ರದ ಶೀರ್ಷಿಕೆಯಾಗಿದ್ದು, “ಬಾನ ದಾರಿಯಲ್ಲಿ” ಶೀರ್ಷಿಕೆ ಈಗಾಗಲೇ ಜನರ ಮನ ಗೆದ್ದಿದೆ.