HomeNewsಸರಿದು ಹೋದ ‘ಸಂಚಾರಿ’ ನೆನಪಲ್ಲಿ ನೆಂದ ಚೆಂದದ ಕಾರ್ಯಕ್ರಮ…

ಸರಿದು ಹೋದ ‘ಸಂಚಾರಿ’ ನೆನಪಲ್ಲಿ ನೆಂದ ಚೆಂದದ ಕಾರ್ಯಕ್ರಮ…

ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫು ಟ್ರೇಲರ್ ಸೂಪರ್ ಹಿಟ್!

ಓರ್ವ ನಟ ಅಕಾಲಿಕವಾಗಿ ಮರೆಯಾದ ನಂತರ ಅವರು ನಟಿದ ಚಿತ್ರಗಳು ಸರತಿ ಸಾಲಲ್ಲಿ ಬಿಡುಗಡೆಗೆ ಅಣಿಗೊಳ್ಳೋದಿದೆಯಲ್ಲಾ? ಅದು ಸಂಭ್ರಮದ ಸೆರಗನ್ನು ಸಂಕಟದ ಕೆಂಡ ಸುಟ್ಟಂಥಾ ಸ್ಥಿತಿ. ಸದ್ಯಕ್ಕೆ ಸಂಚಾರಿ ವಿಜಯ್ ನಟಿಸಿರೋ ಅಷ್ಟೂ ಚಿತ್ರಗಳ ಭಾಗವಾಗಿರುವವರು

ಅಂಥಾದ್ದೊಂದು ಸಂದಿಗ್ಧತೆಗೀಡಾಗಿದ್ದಾರೆ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರೋ ‘ಪುಗ್ಸಟ್ಟೆ ಲೈಫು ಪುರಸೊತ್ತೇ ಇಲ್ಲ’ ಚಿತ್ರತಂಡದ್ದೂ ಕೂಡಾ ಅದೇ ಪಾಡು. ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಸಿನಿಮಾದ ಟ್ರೈಲರ್ ಲಾಂ ಚ್ ಆಗಿದೆ. ಅದಕ್ಕೀಗ ಅಷ್ಟ ದಿಕ್ಕುಗಳಿಂದಲೂ ಭರಪೂರ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಅದರಲ್ಲಿಯೇ ಗೆಲುವಿನ ಘಮಲು ಕೂಡಾ ನಿಖರವಾಗಿ ತೇಲಿ ಬರುತ್ತಿದೆ. ಆದರೆ, ಚಿತ್ರತಂಡದ ಮನಸಲ್ಲಿ ಮಾತ್ರ ವರ್ಷಗಟ್ಟಲೆ ಜೊತೆಯಾಗಿ ಬೆರೆತಿದ್ದ, ಈ ಚಿತ್ರದ ಕೇಂದ್ರಬಿಂದುವಾದ ಸಂಚಾರಿ ವಿಜಯ್ ಈ ಕ್ಷಣದಲ್ಲಿ ಇರಬೇಕಿತ್ತೆಂಬ ಆರ್ದ್ರ ಭಾವ ಮನೆಮಾಡಿದೆ.


ಪುಗ್ಸಟ್ಟೆ ಲೈಫು ಅರವಿಂದ್ ಕುಪ್ಳೀಕರ್ ನಿರ್ದೇಶನದ ಚಿತ್ರ. ಖುದ್ದು ಸಂಚಾರಿ ವಿಜಯ್ ಬಹುವಾಗಿ ಮೆಚ್ಚಿಕೊಂಡು, ಲೀಡ್ ರೋಲನ್ನು ಆವಾಹಿಸಿಕೊಂಡು ನಟಿಸಿದ್ದ ಸಿನಿಮಾವಿದು. ಇದರ ಟ್ರೈಲರ್ ಲಾಂಚ್ ಕಾರ್ಯಕ್ರಮ ಮುಖ್ಯಮಂತ್ರಿ ಚಂದ್ರು, ಬಿ ಜಯಶ್ರೀ ಮುಂತಾದ ಅತಿಥಿಗಳ ಸಮ್ಮುಖದಲ್ಲಿ ಅರ್ಥವತ್ತಾಗಿ ನೆರವೇರಿತು. ಈ ಸಂದರ್ಭದಲ್ಲಿ ಸಿನಿಮಾ ಬಗೆಗಿನ ಮಾತು ಸಂಚಾರಿ ವಿಜಯ್ ಅವರ ನೆನಪುಗಳನ್ನು ಸವರಿಕೊಂಡೇ ಸಾಗಿ ಬಂದಿತ್ತು. ಎಲ್ಲ ಅತಿಥಿಗಳೂ ಕೂಡಾ ಸಂಚಾರಿ ವಿಜಯ್ ಎಂಬ ಪ್ರತಿಭಾವಂತ ನಟನ ಅಕಾಲಿಕ ನಿರ್ಗಮನಕ್ಕೆ ಮರುಗುತ್ತಲೇ ಈ ಟ್ರೈಲರ್ ಅನ್ನು ಲಾಂಚ್ ಮಾಡಿದರು. ಚಿತ್ರತಂಡವಂತೂ ವೇದಿಕೆಯಲ್ಲಿ ಒಂದು ಆಸನವನ್ನು ಖಾಲಿ ಬಿಟ್ಟು ಅದನ್ನು ಸಂಚಾರಿಗೇ ಸೀಮಿತ ಎಂಬಂತೆ ಬಿಂಬಿಸಿದ್ದು ಅದೊಂದು ತೆರನಾದ ಭಾವುಕ ವಾತಾವರಣಕ್ಕೂ ಕಾರಣವಾಯ್ತು.
ರಂಗಾಯಣ ರಘು ಸಂಚಾರಿ ವಿಜಯ್ ಅವರನ್ನು ಬಹು ಕಾಲದಿಂದ ಹತ್ತಿರದಿಂದ ಬಲ್ಲವರು. ವಿಜಯ್ ಎಂಬ ಪ್ರತಿಭೆ ನಟನಾಗಿ ಪಳಗಿಕೊಂಡಿದ್ದದ್ದು ಅವರ ನೆರಳಿನಲ್ಲಿಯೇ. ಅಂಥಾ ವಿಜಯ್ ಜೊತೆಗೆ ನಟಿಸಿದ ಚಿತ್ರದ ಕಾರ್ಯಕ್ರಮವನ್ನು ಅವರಿಲ್ಲದ ಘಳಿಗೆಯಲ್ಲಿ

ನಡೆಸಬೇಕಾಗದ ನೋವು ರಂಗಾಯಣ ರಘು ಮಾತಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿತ್ತು. ಇನ್ನು ಸಂಚಾರಿ ನೆನಪಲ್ಲಿ ಅಕ್ಷರಶಃ ಭಾವುಕರಾಗಿ ಅವರೊಂದಿಗಿನ ಆರಂಭಿಕ ಕ್ಷಣಗಳನ್ನು ಮೆಲುಕು ಹಾಕಿದವರು ಅಚ್ಯುತ ಕುಮಾರ್. ದಾಸವಾಳ ಚಿತ್ರದ ಮೂಲಕ ಪರಿಚಿತರಾದ ಸಂಚಾರಿ ಪಾತ್ರವನ್ನು ಆವಾಹಿಸಿಕೊಳ್ಳುತ್ತಿದ್ದ ರೀತಿ, ಆ ನಂತದ ರಾಷ್ಟ್ರ ಪ್ರಶಸ್ತಿ ಪಡೆಯುವಷ್ಟರ ಮಟ್ಟಿಗೆ ಬೆಳೆದು ನಿಂತ ವಿದ್ಯಮಾನಗಳನ್ನೆಲ್ಲ ಅಚ್ಯುತ್ ಕುಮಾರ್ ಮನ ಮುಟ್ಟುವಂತೆ ನೆನಪಿಸಿಕೊಂಡರು.
ಇಂಥಾ ವಾತಾವರಣದಲ್ಲಿ ಬಿಡುಗಡೆಯಾಗಿರೋ ಪುಕ್ಸಟ್ಟೆ ಲೈಫು ಟ್ರೈಲರ್‌ಗೆ ವ್ಯಾಪಕ ಮನ್ನಣೆ ದೊರಕುತ್ತಿದೆ. ಚೆಂದಗೆ ಮೂಡಿ ಬಂದಿರೋ ಈ ಟ್ರೈಲರ್ ಅನ್ನು ವೀಕ್ಷಕರೆಲ್ಲ ಕೊಂಡಾಡುತ್ತಾ, ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಬೀಗ ರಿಪೇರಿ ಮಾಡೋ ಕಾಯಕದ ಶಹಜಹಾನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅತ್ತ ಬೀಗ ರಿಪೇರಿಯಿಂದ ಬರೋ ಕಾಸಿನಿಂದ ಸಂಸಾರದ ಭಾರ ಹೊರಲಾರದೆ ಕಂಗಾಲಾಗಿರೋ ಶಹಜಹಾನ್ ಈ ವ್ಯವಸ್ಥೆಯ ಚಕ್ರಸುಳಿಗೆ ಸಿಕ್ಕು ನಲುಗುವ ಅಪರೂಪದ ಕಥೆಯೊಂದು ಪಕ್ಸಟ್ಟೆ ಲೈಫಿನೊಳಗಿದೆ. ಒಟ್ಟಾರೆಯಾಗಿ, ಇದೊಂದು ಭಿನ್ನ ಕಥಾ ಹಂದರದ, ಹೊಸಾ ಅಲೆಯ ಚಿತ್ರ ಎನ್ನಲಡ್ಡಿಯಿಲ್ಲ.
ಈ ಚಿತ್ರದಲ್ಲಿ ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವಾಸು ಧೀಕ್ಷಿತ್ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗರಾಜ್ ಸೋಮಯಾಜಿ ಬಲು ಪ್ರೀತಿಯಿಂದ ನಿರ್ಮಾಣ ಮಾಡಿರುವ ‘ಪುಕ್ಸಟ್ಟೆ ಲೈಫು ಪುರಸೊತ್ತೇ ಇಲ್ಲ’ ಚಿತ್ರಮಂದಿರಗಳಿಗೆ ಎಂಟ್ರಿ ಕೊಡುವ ಸನ್ನಾಹದಲ್ಲಿದೆ.

Must Read

spot_img
Share via
Copy link
Powered by Social Snap