ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಮಾಸ್ ಟೀಸರ್ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎಸ್. ಎಸ್ ರಾಜಮೌಳಿ ತೆಲುಗು ಟೀಸರ್ ಬಿಡುಗಡೆ ಮಾಡಿದ್ದು, ಶಾಹಿದ್ ಕಪೂರ್, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್, ಧನುಷ್ ಹಿಂದಿ, ಕನ್ನಡ, ಮಲಯಾಳಂ, ತಮಿಳು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುವ ದಸರಾ ಹಬ್ಬವನ್ನು ಭಾರತದಾದ್ಯಂತ ಹೆಚ್ಚು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಅದರಂತೆ ‘ದಸರಾ’ ಚಿತ್ರವೂ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಟೀಸರ್ ತುಣುಕು ಸಾಕ್ಷಿಯಾಗಿದೆ.
ಚಿತ್ರಕ್ಕಾಗಿ ನ್ಯಾಚುರಲ್ ಸ್ಟಾರ್ ನಾನಿ ಮೇಕೋವರ್, ರಗಡ್ ಲುಕ್ ಟೀಸರ್ ನಲ್ಲಿ ಗಮನ ಸೆಳೆಯುತ್ತಿದೆ. ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಟೀಸರ್ ಝಲಕ್ ನಲ್ಲಿ ಅನಾವರಣ ಮಾಡಲಾಗಿದ್ದು ಪ್ರೇಕ್ಷಕರಲ್ಲಿ ಟೀಸರ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.
ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟ ನ್ಯಾಚುರಲ್ ಸ್ಟಾರ್ ನಾನಿ ಕಳೆದ ವರ್ಷ ತೆಲುಗಿನಲ್ಲಿ ಆರ್ ಆರ್ ಆರ್ ಕನ್ನಡದಲ್ಲಿ ಕೆಜಿಎಫ್ 2 , ಕಾಂತಾರ ಸಿನಿಮಾಗಳ ಸೂಪರ್ ಹಿಟ್ ಆಗಿವೆ ಈ ವರ್ಷ ದಸರಾ ಆ ಸಿನಿಮಾಗಳ ಲಿಸ್ಟ್ ಗೆ ಸೇರಲಿದೆ ಎಂದು ಗರ್ವದಿಂದ ಹೇಳುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ರು.
ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೆಗಾ ಪ್ರಾಜೆಕ್ಟ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ ಟೀಸರ್ ಮೂಲಕ ಮಾರ್ಚ್ 30ರಂದು ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಆಮಂತ್ರಣ ನೀಡಿದೆ.
ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.