ನಿರ್ಮಾಪಕ ಕೆ.ಮಂಜು ಹುಟ್ಟುಹಬ್ಬಕ್ಕೆ ಹಾಡಿನ ಉಡುಗೊರೆ ನೀಡಿದ ಚಿತ್ರತಂಡ.
ಕೆ.ಮಂಜು ಅರ್ಪಿಸುವ,
ಗುಜ್ಜಾಲ್ ಟಾಕೀಸ್ ಲಾಂಛನದಲ್ಲಿ ಪುರುಷೋತ್ತಮ ಗುಜ್ಜಾಲ್ ನಿರ್ಮಿಸುತ್ತಿರುವ, ನಂದ ಕಿಶೋರ್ ನಿರ್ದೇಶನದಲ್ಲಿ ಶ್ರೇಯಸ್ಸ್ ಕೆ ಮಂಜು ನಾಯಕನಾಗಿ ನಟಿಸುತ್ತಿರುವ “ರಾಣ” ಚಿತ್ರದ ಹಾಡೊಂದನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ.
ಶಿವು ಭೇರ್ಗಿ ಬರೆದಿರುವ “ಮಳ್ಳಿ ಮಳ್ಳಿ” ಎಂಬ ಹಾಡಿಗೆ ನಾಯಕ ಶ್ರೇಯಸ್ಸ್ ಹಾಗೂ ಸಂಯುಕ್ತ ಹೆಗಡೆ ಹೆಜ್ಜೆ ಹಾಕಿದ್ದಾರೆ. ಇಮ್ರಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಶಿವು ಅದ್ಭುತವಾದ ಸೆಟ್ ಹಾಕಿದ್ದಾರೆ.
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಕೆ.ಮಂಜು ಅವರು ಮಗನ ಮೇಲಿಟ್ಟರುವ ಪ್ರೀತಿ. ಈ ಹಾಡನ್ನು ನೋಡಿದರೆ ಶ್ರೇಯಸ್ಸ್ ಪಟ್ಟಿರುವ ಶ್ರಮ ತಿಳಿಯುತ್ತದೆ. ಸಂಯಕ್ತ ಅವರ ನಟನೆಯೂ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿ ಬಂದಿರುತ್ತದೆ ಎಂಬ ಭರವಸೆಯಿದೆ.
ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದ ದುನಿಯಾ ವಿಜಯ್, ಕೆ.ಮಂಜು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ನಮ್ಮ ಮೇಲೆ ಪ್ರೀತಿಯಿಟ್ಟು ಬಂದಿರುವ ದುನಿಯಾ ವಿಜಯ್ ಅವರಿಗೆ ಧನ್ಯವಾದ. ‘ರಾಣ’ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ಪುರುಷೋತ್ತಮ್ ಕಾರಣ . ಯಾವುದಕ್ಕೂ ಕೊರತೆ ಇಲ್ಲದಂತೆ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ನಂದಕಿಶೋರ್ ಕಾರ್ಯವೈಖರಿ ಸೊಗಸಾಗಿದೆ. ನನ್ನ ಮಗನ ಅಭಿನಯವು ಚೆನ್ನಾಗಿದೆ. ಅವನಿಗೆ ನಾನು ಅಪ್ಪು ಅವರ ತರಹ ಬಾಳಬೇಕು ಎಂದು ಸಲಹೆ ನೀಡಿದ್ದೀನಿ ಎಂದರು ಕೆ.ಮಂಜು.
ನಾನು ಮೊದಲು ಅಪ್ಪು ಅವರನ್ನು ನೆನೆದು ಮಾತು ಆರಂಭಿಸುತ್ತೇನೆ. ಸಂಯುಕ್ತ ಹೆಗಡೆ ಒಳ್ಳೆಯ ನೃತ್ಯಗಾರ್ತಿ. ಅವರೊಡನೆ ನೃತ್ಯ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಹೆಚ್ಚು ಅಭ್ಯಾಸ ಮಾಡಿದ್ದೆ. ಈ ನಿಟ್ಟಿನಲ್ಲಿ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅವರ ಸಹಾಯಕರ ಸಹಕಾರ ಮರೆಯಲು ಸಾಧ್ಯವಿಲ್ಲ. ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವಲ್ಪ ಮಾತ್ರ ಬಾಕಿಯಿದೆ. ನಿರ್ಮಾಪಕ ಪುರುಷೋತ್ತಮ್, ನಿರ್ದೇಶಕ ನಂದಕಿಶೋರ್ ಹಾಗೂ ನಮ್ಮ ತಂದೆ ಕೆ.ಮಂಜು ಅವರಿಗೆ ಧನ್ಯವಾದ ಎಂದರು ನಾಯಕ ಶ್ರೇಯಸ್ಸ್.
ನೀವೆಲ್ಲರೂ ಹಾಡು ಚೆನ್ನಾಗಿದೆ ಎಂದು ಹೇಳಿದ್ದು ನನಗೆ ಸಂತಸ ತಂದಿದೆ. ನನಗೆ ಚಿಕ್ಕ ವಯಸ್ಸಿನಿಂದಲೂ ನೃತ್ಯದಲ್ಲಿ ಆಸಕ್ತಿ. ಈ ಹಾಡಿನಲ್ಲಿ ನೃತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಂದಕಿಶೋರ್ ಅವರ ನಿರ್ದೇಶನ ಹಾಗೂ ಶ್ರೇಯಸ್ಸ್ ಅವರ ಅಭಿನಯ ಚೆನ್ನಾಗಿದೆ ಎನ್ನುತ್ತಾರೆ ಸಂಯುಕ್ತ ಹೆಗಡೆ.
ಇದೊಂದು ಬ್ಯಾಚುಲರ್ ಪಾರ್ಟಿ ಕುರಿತಾದ ಹಾಡು. ಇದರಲ್ಲಿ ಸಂಯುಕ್ತ ಹೆಗಡೆ ಮತ್ತು ಶ್ರೇಯಸ್ಸ್ ಅಮೋಘವಾಗಿ ನಟಿಸಿದ್ದಾರೆ. ಶಿವು ಅವರ ಕಲಾ ನಿರ್ದೇಶನ, ಶಿವು ಭೇರ್ಗಿ ಅವರ ಗೀತರಚನೆ, ಇಮ್ರಾನ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಕೆ.ಮಂಜು ಅವರ ಹುಟ್ಚುಹಬ್ಬಕ್ಕೆ ಹಾಡು ಬಿಡುಗಡೆ ಮಾಡಿದ್ದೇವೆ. ಮೇ ವೇಳೆಗೆ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಪುರಷೋತ್ತಮ್ ಗುಜ್ಜಾಲ್ ತಿಳಿಸಿದರು.
ನಿರ್ದೇಶಕ ನಂದಕಿಶೋರ್, ಛಾಯಾಗ್ರಾಹಕ ಶೇಖರ್ ಚಂದ್ರ, ನಟಿ ರಜನಿ ಭಾರದ್ವಾಜ್ ಮುಂತಾದವರು ಸಿನಿಮಾ ಬಗ್ಗೆ ಮಾತನಾಡಿದರು. ರಮೇಶ್ ರೆಡ್ಡಿ, ದೀಪಕ್ ಅತಿಥಿಗಳಾಗಿ ಆಗಮಿಸಿದ್ದರು.
ಚಂದನ್ ಶೆಟ್ಟಿ ಈ ಚಿತ್ರದ ಸುಮಧುರ ಹಾಡುಗಳಿಗೆ ಸಂಗೀತ ನೀಡಿದ್ದಾರೆ.