‘ಶಿವಾಜಿ ಸುರತ್ಕಲ್ ೨ – ದ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ’ ಚಿತ್ರವು ಏಪ್ರಿಲ್ ತಿಂಗಳ ೧೪ನೇ ತಾರೀಖು ಬಿಡುಗಡೆಯಾಗಲಿದೆ ಎಂದು ಚಿತ್ರತಂಡದಿಂದ ತಿಳಿದು ಬಂದಿದೆ. ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವವರು ಅನೂಪ್ ಗೌಡ ಮತ್ತು ರೇಖಾ ಕೆ ಎನ್. ಚಿತ್ರಕಥೆ ಗೆ ನೆರವು ನೀಡಿ ಸ್ಕ್ರಿಪ್ಟ್ ಕನ್ಸಲ್ಟೆಂಟ್ ಆಗಿ ಅಭಿಜಿತ್ ವೈ ಆರ್ ಕೆಲಸ ಮಾಡಿದ್ದಾರೆ. ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿರುವ ಈ ಚಿತ್ರ ರಮೇಶ್ ಅರವಿಂದ್ ರವರ ೧೦೩ ಸಿನಿಮಾ ಆಗಲಿದೆ ‘ದಿ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ’. ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ ಗುರುಪ್ರಸಾದ್ ಎಂ ಜಿ ಮತ್ತು ದರ್ಶನ್ ಅಂಬಟ್. ಪ್ರಸ್ತುತ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಚಿತ್ರದ ಕೊನೆಯ ಹಾಗೂ ಒಂದು ವಿಶಿಷ್ಟ ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮುಗಿಸಿದೆ ಚಿತ್ರತಂಡ. ಈ ಹಾಡಿಗೆ ಮೆರಗು ಹೆಚ್ಚಿಸಿದ್ದು ೭೭೭ ಚಾರ್ಲಿ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ. ಹಾಡಿನ ಕೊರಿಯೋಗ್ರಫಿ ಮಾಡಿದ್ದು ಧನಂಜಯ್ ಮಾಸ್ಟರ್. ಚಿತ್ರದಲ್ಲಿ ರಮೇಶ್ ಅರವಿಂದ್ ರವರ ಜೊತೆ ರಾಧಿಕಾ ನಾರಾಯಣ್ ಹಾಗೂ ಮೇಘನಾ ಗಾಂವ್ಕರ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ಚಿತ್ರಕ್ಕೆ ಮೆರಗು ತುಂಬಿದ್ದಾರೆ.
ಮೊದಲ ಕಂತಾದ ರಣಗಿರಿ ರಹಸ್ಯದಲ್ಲ ಶಿವಾಜಿಯ ಅಗಾಧವಾದ ಬುದ್ಧಿವಂತಿಕೆಯನ್ನು ಕೆಲಸಕ್ಕೆ ಹಚ್ಚಿದ್ದು ಎಲ್ಲರಿಗೂ ನೆನಪಿದೆ. ಆದರೆ ಈ ಚಿತ್ರದಲ್ಲಿ ಕೇಸ್ ನಂ ೧೩೧, ಶಿವಾಜಿಯನ್ನು ಇನ್ನಷ್ಟು ಸಾವಾಲುಗಳಿಗೆ ಒಡ್ಡಲಿದೆ ಎಂದು ನಿರ್ದೇಶಕರು ಹೇಳುತ್ತಾರೆ. ಆ ಚಿತ್ರದಲ್ಲಿದ್ದಂತೆಯೇ, ಇಲ್ಲಿಯೂ ಶಿವಾಜಿಯ ಖಾಸಗಿ ಬದುಕಿನ ಒಂದು ಕಿರುನೋಟವೂ ಬರುತ್ತದೆ. ಮೊದಲ ಕಂತಿನಂತೆಯೇ ಈ ಚಿತ್ರವೂ ಒಂದು ಥಿಯೇಟರ್ ಅನುಭವ ಎನ್ನುತ್ತಾರೆ ಆಕಾಶ್. ಚಿತ್ರಕ್ಕೆ ಆರು ತಿಂಗಳು ಶ್ರಮ ವಹಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಜೂಡಾ ಸ್ಯಾಂಡಿ. ಚಿತ್ರದ ಸೌಂಡ್ ಎಫ಼ೆಕ್ಟ್ಸ್ ಕೂಡಾ ರಾಜನ್ ಅವರು ಅತ್ಯಂತ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಓಟಿಟಿ, ಟಿವಿ ಯ ಅನುಭವಕ್ಕಿಂತ, ಮಾಯಾವಿಯ ಜಾಲವನ್ನು ಶಿವಾಜಿ ಹೇಗೆ ಭೇದಿಸುತ್ತಾರೆ ಎಂದು ನೋಡುವುದಕ್ಕೆ ಚಿತ್ರಮಂದಿರದ ವೀಕ್ಷಣೆಯೇ ಸೂಕ್ತ ಎನ್ನುತ್ತಾರೆ ಆಕಾಶ್.
ಚಿತ್ರದ ನಿರ್ಮಾಪಕರು ಪ್ರತಿ ಹಂತದಲ್ಲಿಯೂ, ಚಿತ್ರದ ಗುಣಮಟ್ಟ ಎಲ್ಲಿಯೂ ಕುಂದದಂತೆ ಮುತುವರ್ಜಿ ವಹಿಸಿದ್ದಾರೆ. ಚಿತ್ರಕಥೆಗೆ ಕನ್ಸಲ್ಟೆಂಟ್ ಆಗಿ ಅಭಿಜಿತ್ ವೈ ಆರ್ ಕೆಲಸ ಮಾಡಿದ್ದಾರೆ. ಮೊದಲನೇ ಕಂತಿನಲ್ಲೇ ನಿರೀಕ್ಷೆ ಮೂಡಿಸಿದ್ದ ಶಿವಾಜಿ ಸುರತ್ಕಲ್ ಈಗ ತನ್ನ ಎರಡನೇ ಕಂತಿನೊಂದಿಗೆ ಏಪ್ರಿಲ್ ೧೪ ರಂದು ರಾಜ್ಯಾದ್ಯಂತ ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿದೆ. ಚಿತ್ರದ ಶೀರ್ಷಿಕೆಯಲ್ಲಿರುವ ಆ ಮಾಯಾವಿ ಯಾರು? ಅವನ ಇಂದ್ರಜಾಲವನ್ನು ಶಿವಾಜಿ ಹೇಗೆ ಮೀರಿ ಗೆಲ್ಲುತ್ತಾರೆ – ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿಯೇ ಉತ್ತರ ಸಿಗುತ್ತದೆ ಎಂದು ಆಕಾಶ್ ಶ್ರೀವತ್ಸ ಉತ್ಸಾಹದಿಂದ ಹೇಳುತ್ತಾರೆ.