ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರ 2023 ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ.
ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಚಿತ್ರದ ಬಿಡುಗಡೆ ದಿನಾಂಕ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ. ನಿರ್ಮಾಪಕ ನವೀನ್ ರಾವ್ ಹಾಗೂ ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು.
ನಾನು ಹಾಗೂ ನಿರ್ಮಾಪಕ ನವೀನ್ ರಾವ್ ಸಹಪಾಠಿಗಳು. ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಒಂದು ದಿನ ನನ್ನ ಸ್ನೇಹಿತ ನವೀನ್ ರಾವ್ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದರು. ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿ ಅಂತ ನಿರ್ಧರಿಸಲಾಯಿತು. ಆಗ ಅವರಿಬ್ಬರ ” ದಿಯಾ” ಹಾಗೂ “ಲವ್ ಮಾಕ್ಟೇಲ್” ಸಿನಿಮಾಗಳು ಯಶಸ್ವಿಯಾಗಿದ್ದವು. ಹೀಗೆ ಚಿತ್ರ ಆರಂಭವಾಗಿ ಈಗ ಬಿಡುಗಡೆ ಹಂತಕ್ಕೆ ತಲುಪಿದೆ. ಫೆಬ್ರವರಿ ಹತ್ತರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ನವೀನ್ ದ್ವಾರಕನಾಥ್.
ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದಾಗ ನನಗೆ ಅನಿಸಿದ್ದು, ನಿರ್ಮಾಪಕ ಹಣ ಒದಗಿಸಿಕೊಡತ್ತಾನೆ. ಆದರೆ ಇಡೀ ತಂಡ ಚಿತ್ರಕ್ಕಾಗಿ ಎಷ್ಟು ಕಷ್ಟ ಪಡುತ್ತದೆ ಎಂದು. ಅವರೆಲ್ಲರ ಶ್ರಮದಿಂದ ಉತ್ತಮ ಚಿತ್ರವೊಂದು ನಿರ್ಮಾಣವಾಗಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ನವೀನ್ ರಾವ್.
ನಾನು ತುಳು ಸಿನಿಮಾ ಒಂದನ್ನು ಆಗಷ್ಟೇ ಮುಗಿಸಿದೆ. ಮಂಗಳೂರಿನಲ್ಲಿ ನಿರ್ದೇಶಕರು ಈ ಚಿತ್ರದ ಕಥೆ ಹೇಳಿದರು. ಇಷ್ಟವಾಯಿತು. ಎಲ್ಲದ್ದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ನಾವು ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ ಎಂಬುದನ್ನು ತೋರಿಸಿದ್ದೇವೆ ಎನ್ನುತ್ತಾರೆ ನಾಯಕ ಪೃಥ್ವಿ ಅಂಬರ್.
ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ್ದು ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಫೆಬ್ರವರಿ ತಿಂಗಳು ನನಗೆ ಲಕ್ಕಿ. ಈ ಚಿತ್ರ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರುತ್ತಿರುವುದು ಮತ್ತಷ್ಟು ಖುಷಿಯಾಗಿದೆ ಎಂದರು ನಾಯಕಿ ಮಿಲನ ನಾಗರಾಜ್.
ಸಂಗೀತ ನಿರ್ದೇಶಕ ಹರೀಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ನಿರಂಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪೃಥ್ವಿ ಅಂಬರ್, ಮಿಲನ ನಾಗರಾಜ್,
ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.