ದೇಶ, ವಿದೇಶದ ನಾನಾಭಾಗಗಳ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನೂರೈವತ್ತಕ್ಕೂ ಅಧಿಕ ಪ್ರಶಸ್ತಿ ಪಡೆದುಕೊಂಡಿರುವ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವು ವಿವಿಧ ಕ್ಷೇತ್ರದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನನ್ನ ಮೊದಲ ಚಿತ್ರ “ಕೃಷ್ಣ ಗಾರ್ಮೆಂಟ್ಸ್” ನಿರೀಕ್ಷಿತ ಗೆಲವು ದೊರಕಲಿಲ್ಲ. ಎರಡನೇ ಚಿತ್ರ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರ ಬಿಡುಗಡೆಗೆ ಮುಂಚೆಯೇ ಜನಪ್ರಿಯವಾಗಿದೆ. ನೂರವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇಂತಹ ನನ್ನ ಕನಸಿಗೆ ಆಸರೆ ನೀಡಿದ್ದ ನಿರ್ಮಾಪಕರಿಗೆ ಧನ್ಯವಾದ. ನನ್ನ ಚಿತ್ರತಂಡಕ್ಕೆ ವಿಶೇಷ ಧನ್ಯವಾದ. ಈ ಚಿತ್ರದ ಹೆಚ್ಚು ಚಿತ್ರೀಕರಣ ರಾಮನಗರದ ಸ್ಮಶಾನದಲ್ಲಿ ನಡೆದಿದೆ. ಅಲ್ಲಿ ಹೋಗಿ ಹಿರಿಯರ ಆಶೀರ್ವಾದ ಪಡೆದುಕೊಂಡು ಬಂದಿರುವುದಾಗಿ ನಿರ್ದೇಶಕ ಸಿದ್ದು ಪೂರ್ಣಚಂದ್ರ ತಿಳಿಸಿದರು.
ಈ ಚಿತ್ರದ ಕಥೆ ಕೇಳಿದ ದಿನವೇ ನಿರ್ಮಾಣ ಮಾಡಬೇಕೆಂದು ಮನಸು ಮಾಡಿದ್ದೆ. ನನ್ನ ಸ್ನೇಹಿತ ಪ್ರಶಾಂತ್ ವರ್ಕು ಅವರ ಮೂಲಕ ನಿರ್ದೇಶಕ ಸಿದ್ದು ಪೂರ್ಣಚಂದ್ರ ಪರಿಚಿತರಾದರು. ಉತ್ತಮ ಚಿತ್ರ ಮಾಡಿಕೊಟ್ಟಿದ್ದಕ್ಕೆ ಸಿದ್ದು ಅವರಿಗೆ ವಂದನೆ.. ನಮ್ಮ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಶರಣಪ್ಪ ಎಂ ಕೊಟಗಿ.
ನನಗೆ ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ನಾನು ಆಭಾರಿ. ಚಿಕ್ಕವಯಸ್ಸಿನಲ್ಲಿ ಅಶೋಕ ಹೋಟೆಲ್ ಮುಂದೆ ಓಡಾಡುವಾಗ ಒಂದು ದಿನ ಈ ಹೋಟೆಲ್ ಒಳಗೆ ಹೋಗಬೇಕು ಅಂದುಕೊಳ್ಳುತ್ತಿದೆ. ಈಗ ಇದೇ ಹೋಟೆಲ್ ನಲ್ಲಿ ನನ್ನ ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಖುಷಿ ಎಂದರು ನಾಯಕ ವರ್ಧನ್.
ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಗಮಿಸಿದ್ದ ಗಣ್ಯರು ಚಿತ್ರದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ದಿಲೀಪ್ ಅವರ ಸಾರಥ್ಯದ ಮ್ಯೂಸಿಕ್ ಬಾಕ್ಸ್ ಎಂಬ ಆಡಿಯೋ ಕಂಪನಿಯನ್ನು ಹಿರಿಯ ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಪಿ ಆರ್ ಓ ಸುಧೀಂದ್ರ ವೆಂಕಟೇಶ್ ಹಾಗೂ ಗಾಯಕ ಶಶಿಧರ್ ಕೋಟೆ ಬಿಡುಗಡೆ ಮಾಡಿದರು.
ಬರಿ ಕನ್ನಡದಲ್ಲಿ ಮಾತ್ರವಿದ್ದ ಮ್ಯೂಸಿಕ್ ಬಾಕ್ಸ್ ಈಗ ಹನ್ನೊಂದು ಭಾಷೆಗಳಲ್ಲಿ ಆರಂಭವಾಗಿರುವುದಾಗಿ ದಿಲೀಪ್ ತಿಳಿಸಿದರು.