Kannada Beatz
News

ಸ್ಯಾಂಡಲ್ ವುಡ್ ನ ತಾರಾ ದಂಪತಿಗಳಿಂದ(ಸ್ಟಾರ್ ಕಪಲ್ಸ್) ದುನಿಯಾ ವಿಜಯ್ – ರಚಿತರಾಮ್ ಅಭಿನಯದ “ಲ್ಯಾಂಡ್ ಲಾರ್ಡ್” ಚಿತ್ರದ “ನಿಂಗವ್ವ ನಿಂಗವ್ವ” ಹಾಡು ಬಿಡುಗಡೆ” .

ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ – ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್, ರಚಿತರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ “ನಿಂಗವ್ವ ನಿಂಗವ್ವ” ಹಾಡು ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ – ಅನನ್ಯ ಭಟ್ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ‌. ದುನಿಯಾ ವಿಜಯ್ – ರಚಿತರಾಮ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಸ್ಯಾಂಡಲ್ ವುಡ್ ನ ತಾರಾ ದಂಪತಿಗಳಾದ “ನೆನಪಿರಲಿ” ಪ್ರೇಮ್ – ಜ್ಯೋತಿ, ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಹಾಗೂ ತರುಣ್ ಸುಧೀರ್ – ಸೋನಾಲ್ ಅವರಿಂದ “ನಿಂಗವ್ವ ನಿಂಗವ್ವ” ಹಾಡು ಬಿಡುಗಡೆಯಾಯಿತು. ಹಾಡು ಬಿಡುಗಡೆ ಮಾಡಿ ಮಾತನಾಡಿದ ದಂಪತಿಗಳು ಯೋಗರಾಜ್ ಭಟ್ ಅವರ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ವಿಜಯ್ ಪ್ರಕಾಶ್ ಗಾಯ‌ನ ಹಾಗೂ ವಿಶೇಷವಾಗಿ ದುನಿಯಾ ವಿಜಯ್, ರಚಿತರಾಮ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸ್ವಾಮಿ ಅವರ ಛಾಯಾಗ್ರಹಣ ಪೈಟಿಂಗ್ ಇದ್ದ ಹಾಗೆ ಇದೆ ಎಂದು ಬಣ್ಣಿಸಿದರು. ನಿರ್ದೇಶಕರ ಕಾರ್ಯವೈಖರಿ ಚೆನ್ನಾಗಿದೆ ಎಂದು ತಿಳಿಸಿ, ನಿರ್ಮಾಪಕರಿಗೆ ಶುಭವನ್ನು ಕೋರಿದರು. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಆನಂತರ ದಂಪತಿಗಳಿಗೆ ದುನಿಯಾ ವಿಜಯ್ ಹಾಗೂ ರಚಿತರಾಮ್ ಬಾಗಿನ ನೀಡಿ ಸನ್ಮಾನಿಸಿದರು. ನೀನಾಸಂ ಸತೀಶ್ ಹಾಗೂ ಗುರು ದೇಶಪಾಂಡೆ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಭದ ಸಂತೋಷವನ್ನು ನೋಡಿ ಮಾತುಗಳೆ ಹೊರಡುತ್ತಿಲ್ಲ. ಮೊದಲಿಗೆ ಹಾಡು ಬಿಡುಗಡೆ ಮಾಡಿ ಕೊಟ್ಟ ದಂಪತಿಗಳಿಗೆ ಧನ್ಯವಾದ. ನನ್ನ ಹಿಟ್ ಸಾಂಗ್ ಗಳ ಲಿಸ್ಟ್ ನಲ್ಲಿ ಅಧಿಕ ಹಾಡುಗಳನ್ನು ಬರೆದಿರುವುದು ಯೋಗರಾಜ್ ಭಟ್ ಅವರು. ಈ ಹಾಡನ್ನು ಅದ್ಭುತವಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಭೂಷಣ್ ಅವರ ನೃತ್ಯ ನಿರ್ದೇಶನ ಕೂಡ ಉತ್ತಮವಾಗಿದೆ. ಸಾಮಾನ್ಯವಾಗಿ ನಾಯಕಿಯರು ಈ ವಯಸ್ಸಿನ ಪಾತ್ರ ಒಪ್ಪಿಕೊಳ್ಳುವುದು ಕಡಿಮೆ. ರಚಿತರಾಮ್ ಅವರು ಒಪ್ಪಿಕೊಂಡು ಈ ಪಾತ್ರ ಮಾಡಿದ್ದಾರೆ. ನನಗೂ ಕೂಡ ಈ ಹಾಡು‌ ಬಿಡುಗಡೆ ಆಗುವವರೆಗೂ ನನ್ನ ಪಾತ್ರದ ಬಗ್ಗೆ ಎಲ್ಲರೂ ಏನು ಹೇಳಬಹುದು ಎಂಬ ಕುತೂಹಲವಿತ್ತು. ಈಗ ಎಲ್ಲರೂ ಪ್ರಶಂಸೆ ನೀಡುತ್ತಿದ್ದಾರೆ. ಒಳ್ಳೆಯ ಕಥೆ ಮಾಡಿಕೊಂಡಿರುವ ನಿರ್ದೇಶಕ ಜಡೇಶ್ ಕೆ ಹಂಪಿ ಅವರಿಗೆ ಹಾಗೂ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಅಭಿನಂದನೆಗಳನ್ನು ತಿಳಿಸಿದ ನಾಯಕ ವಿಜಯ್ ಕುಮಾರ್ ಜನವರಿ 23 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಪ್ರೋತ್ಸಾಹ ನೀಡಿ ಎಂದರು.

ಈ ಹಾಡು ಉತ್ತಮವಾಗಿ ಮೂಡಿಬಂದಿದೆ‌. ಈ ಹಾಡಿನ ಚಿತ್ರೀಕರಣ ಸಮಯದಿಂದಲೂ ಯಾವಾಗ ಬಿಡುಗಡೆಯಾಗಬಹುದೆಂದು ಕಾಯುತ್ತಿದೆ. ಸ್ವಾಮಿ ಅವರ ಛಾಯಾಗ್ರಹಣ, ಯೋಗರಾಜ್ ಭಟ್ ಅವರ ಸಾಹಿತ್ಯ, ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗು ವಿಜಯ್ ಪ್ರಕಾಶ್ ಅವರ ಗಾಯನ ಎಲ್ಲವೂ ಚೆನ್ನಾಗಿದೆ. ಇನ್ನೂ, ವಿಜಯ್ ಸರ್ ರಾಚಯ್ಯ ಪಾತ್ರದಲ್ಲಿ, ನಾನು ನಿಂಗವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಈ ಹಾಡಲ್ಲಿ ನಮ್ಮಿಬ್ಬರ ಅಭಿನಯಕ್ಕೆ ಎಲ್ಲರೂ ನೀಡುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ ಎಂದು ನಾಯಕಿ ರಚಿತರಾಮ್ ತಿಳಿಸಿದರು.

ಆಗಮಿಸಿದ ಅತಿಥಿಗಳಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ದೇಶಕ ಜಡೇಶ್ ಕೆ ಹಂಪಿ, ನಾನು ಚಿತ್ರರಂಗಕ್ಕೆ ಪ್ರವೇಶ ಮಾಡಲು ಕಾರಣರಾದ ಗುರು ದೇಶಪಾಂಡೆ ಹಾಗು ತರುಣ್ ಸುಧೀರ್ ಇಲ್ಲಿರುವುದು ಖುಷಿಯಾಗಿದೆ. ಇನ್ನೂ, ಈ “ನಿಂಗವ್ವ” ಎಂಬ ಅದ್ಭುತ ಹಾಡನ್ನು ಯೋಗರಾಜ್ ಭಟ್ ಅವರು ಬರೆದುಕೊಟ್ಟಿದ್ದಾರೆ. ವಿಜಿ ಸರ್ ಹಾಗು ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ. ಈಗ ಆ ಸಾಲಿಗೆ “ನಿಂಗವ್ವ” ಕೂಡ ಸೇರಲಿದೆ. ನನ್ನ ಹಿಂದಿನ ಎರಡು ಚಿತ್ರಗಳಿಗೂ ಸಂಗೀತ ಸಂಯೋಜಿಸಿದ್ದ ಅಜನೀಶ್ ಅವರೆ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಅನನ್ಯ ಭಟ್ ಸೊಗಸಾಗಿ ಹಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ಜಡೇಶ್ ಅವರು ಮೊದಲು ಕಥೆ ಹೇಳಿದಾಗ ನಾನು ಸದ್ಯಕ್ಕೆ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಅವರು ನಾವು ನಿರ್ಮಾಣ ಮಾಡುವವರೆಗೂ ಬಿಡಲಿಲ್ಲ. ನನ್ನ ಮಗ ಹೇಮಂತ್ ಗೌಡ ಈ ಚಿತ್ರದ ನಿರ್ಮಾಪಕರು. ನಾನು ಅವರ ಜೊತೆ ಇದ್ದೀನಿ. ಚಿತ್ರ ನಿರ್ಮಾಣ ಮಾಡಲು ಅನೇಕ ಜನ ಸ್ನೇಹಿತರು ಸಾಥ್ ನೀಡಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್. ಹೇಮಂತ್ ಗೌಡ ಅವರು ಸಹ ಜನವರಿ 23 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಹಾಡು ಹುಟ್ಟಿದ ಸಮಯವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿದ ಗೀತರಚನೆಕಾರ ಯೋಗರಾಜ್ ಭಟ್, ಚಿತ್ರಕ್ಕೆ ಶುಭ ಕೋರಿದರು. ಗಾಯಕ ವಿಜಯ್ ಪ್ರಕಾಶ್ ಅವರು ಸಹ “ನಿಂಗವ್ವ” ಹಾಡಿನ ಬಗ್ಗೆ ಮಾತನಾಡಿ, ಎರಡು ಸಾಲುಗಳನ್ನು ಹಾಡಿದರು.

ಇದು ನನ್ನ ಜಡೇಶ್ ಕೆ ಹಂಪಿ ಅವರ ಕಾಂಬಿನೇಶನ್ ನ ಮೂರನೇ ಚಿತ್ರ. ಈ ಹಿಂದೆ ದುನಿಯಾ ವಿಜಯ್ ಹಾಗೂ ರಚಿತರಾಮ್ ಅವರ “ಜಾನಿ ಜಾನಿ ಎಸ್ ಪಪ್ಪ” ಚಿತ್ರಕ್ಕೂ ನಾನೇ ಸಂಗೀತ ಸಂಯೋಜನೆ ಮಾಡಿದ್ದೆ. ಬಹಳ ವರ್ಷಗಳ ನಂತರ ಈ ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ, ವಿಜಯ್ ಪ್ರಕಾಶ್ – ಅನನ್ಯ ಭಟ್ ಅವರ ಗಾಯನದಲ್ಲಿ “ನಿಂಗವ್ವ” ಹಾಡು ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. ಸದ್ಯದಲ್ಲೇ ಉಳಿದ ಹಾಡುಗಳು ಬಿಡುಗಡೆಯಾಗಲಿದೆ ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೇಳಿದರು.

ಸಂಭಾಷಣೆ ಬರೆದಿರುವ ಮಾಸ್ತಿ, ಶ್ರೀಕಾಂತ್, ಛಾಯಾಗ್ರಾಹಕ ಸ್ವಾಮಿ ಜೆ ಗೌಡ, ಸಿ.ಆರ್ ಬಾಬಿ ಹಾಗೂ ಆನಂದ್ ಆಡಿಯೋ ಶ್ಯಾಮ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts

ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಉಡುಂಬಾ ನಿರ್ದೇಶಕ ಶಿವರಾಜ್ ತಯಾರಿ – ಶೀಘ್ರದಲ್ಲೇ ಟೈಟಲ್ ರಿವೀಲ್.

Kannada Beatz

ಶೀರ್ಷಿಕೆ: ಪ್ರಜ್ಯೋತ್ ಮತ್ತು ಚಂದನಾ ಅವರ ಚೊಚ್ಚಲ ಪ್ರೇಮ ಪಯಣ: “ರಾಧಾ ರಾಘವ” – ಪ್ರೀತಿಯ ಬಂಧನದಲ್ಲಿ ಅಡಗಿರುವ ರಹಸ್ಯ

Kannada Beatz

ಮಾರ್ಚ್ ನಲ್ಲಿ “ಮಾರಕಾಸ್ತ್ರ” ಚಿತ್ರದ ಚಿತ್ರೀಕರಣ.

Kannada Beatz

Leave a Comment

Share via
Copy link