Kannada Beatz
News

ಚಿತ್ರೀಕರಣ ಮುಗಿಸಿದ ‘ಮಹಾಕವಿ’

ಬೆಳಗಾವಿಯ ಶ್ರೀ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಮಹಾಕವಿ’ ಕನ್ನಡ ಸಿನಿಮಾದ ಚಿತ್ರೀಕರಣವು ಮುಕ್ತಾಯಗೊಂಡಿದೆ. ಈಗ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ.
‘ಮಹಾಕವಿ’ಯು ಬರಗೂರರ ನಿರ್ದೇಶನದ ಇಪ್ಪತ್ತೈದನೇ ಚಿತ್ರ ಎನ್ನುವುದು ಒಂದು ವಿಶೇಷ.


‘ಮಹಾಕವಿ’ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಪಂಪ ಮಹಾಕವಿಯು ರಾಜನ ಆಸ್ಥಾನದಲ್ಲಿದ್ದೂ ಸೃಜನಶೀಲ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡು ಬರೆದ ಕವಿ. ಪ್ರಭುತ್ವ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಕುರಿತ ಪಂಪನ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ. ಅಂತೆಯೇ ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊಟ್ಟಮೊದಲ ಕವಿ ಪಂಪ. ‘ಆದಿಪುರಾಣ’ದಲ್ಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪ್ರತಿಪಾದಿಸಿದ ಪಂಪ, ‘ವಿಕ್ರಮಾರ್ಜುನ ವಿಜಯ’ದಲ್ಲಿ ಕರ್ಣನ ಪಾತ್ರದ ಮೂಲಕ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾನೆ. ‘ಆದಿಪುರಾಣ’ದಲ್ಲಿ ಅಧಿಕಾರದ ಅಹಂಕಾರಕ್ಕೆ ವಿರೋಧ ಒಡ್ಡಿ ಯುದ್ಧದ ಬದಲು ಶಾಂತಿ ಸಂದೇಶ ನೀಡಿದ್ದಾನೆ. ಭೋಗದ ನಶ್ವರತೆಯನ್ನು ಪ್ರತಿಪಾದಿಸಿದ್ದಾನೆ. ಈ ಎಲ್ಲಾ ಪರಿಕಲ್ಪನೆಗಳಿಗೆ ಪ್ರತೀಕವಾಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆ.


ಪಂಪ ಮಹಾಕವಿಯ ಕೆಲವು ಪದ್ಯಗಳನ್ನು ಚಿತ್ರದಲ್ಲಿ ಬಳಸಿದ್ದು, ಒಂದು ಗೀತೆಯನ್ನು ಬರಗೂರರು ರಚಿಸಿದ್ದಾರೆ. ಜೊತೆಗೆ ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಪಂಪನ ಪಾತ್ರದಲ್ಲಿ ಪ್ರಸಿದ್ಧ ಕಲಾವಿದ ಶ್ರೀ ಕಿಶೋರ್ ಅವರು ಅಭಿನಯಿಸಿದ್ದಾರೆ. ‘ಬಿಗ್‍ಬಾಸ್’ ಖ್ಯಾತಿಯ ಅನುಷಾ ರೈ ನಾಯಕಿಯ ಪಾತ್ರದಲ್ಲಿದ್ದಾರೆ. ಬಾಲಕ ಪಂಪನ ಪಾತ್ರವನ್ನು ಆಕಾಂಕ್ಷ್ ಬರಗೂರು ವಹಿಸಿದ್ದು, ಹಿರಿಯ ನಟರಾದ ಸುಂದರರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೋವಿಂದ್ ಅವರಲ್ಲದೆ ಸುಂದರರಾಜ ಅರಸು, ವತ್ಸಲಾ ಮೋಹನ್, ರಾಘವ್, ಹನುಮಂತೇಗೌಡ, ಶಾಂತರಾಜು, ಚಲಪತಿ ಸಿರಾ, ಬಾಲಕೃಷ್ಣ ಬರಗೂರು, ನಟರಾಜ್, ಪ್ರವೀಣ್, ಮುಂತಾದವರ ತಾರಾಗಣವಿದೆ.
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಜ್ ಶಿವು ಮತ್ತು ಪ್ರವೀಣ್ ಅವರ ಸಹನಿರ್ದೇಶನ, ತ್ರಿಭುವನ್ ನೃತ್ಯ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವು ಈ ಚಿತ್ರಕ್ಕಿದೆ.
(ಬರಗೂರು ರಾಮಚಂದ್ರಪ್ಪ)

Related posts

ಡೊಳ್ಳು ಸಿನಿಮಾಗೆ ಸಾಥ್ ಕೊಟ್ಟ ರಾಜರತ್ನ ಫ್ಯಾನ್ಸ್…ಇದೇ ಶುಭ ಶುಕ್ರವಾರ ತೆರೆಗೆ ಬರ್ತಿದೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ

Kannada Beatz

ದುನಿಯಾ ವಿಜಯ್ ಅವರಿಂದ ಬಿಡುಗಡೆಯಾಯಿತು ವಿಜಯ್ ಪ್ರಕಾಶ್ ಹಾಡಿರುವ ಈ ಸುಂದರ ಹಾಡು.

Kannada Beatz

ದೊಡ್ಡ ಆಟಕ್ಕೆ ಜೊತೆಯಾದ ರಾಜವರ್ಧನ್ & ಚಂದ್ರಚೂಡ್ ಚಕ್ರವರ್ತಿ

Kannada Beatz

Leave a Comment

Share via
Copy link
Powered by Social Snap