ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಜೈ ಹನುಮಾನ್ ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್‌ಹೀರೋ ಯೂನಿವರ್ಸ್‌ನ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ವರ್ಮಾ. ಇದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯನ್ನು ಹೊಂದಿರಲಿದೆ. ಈ ಚಿತ್ರಕ್ಕೆ ಮಹಾಕಾಳಿ ಎಂಬ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

ಪ್ರಶಾಂತ್ ವರ್ಮಾ ಕಥೆಯಲ್ಲಿ ಕನ್ನಡದ ಭೂಮಿ ಶೆಟ್ಟಿ
ಕುಂದಾಪುರದ ಬೆಡಗಿಗೆ ಭೂಮಿ ಶೆಟ್ಟಿ ಮಹಾಕಾಳಿ ಅವತಾರವೆತ್ತಿದ್ದಾರೆ. ಫಸ್ಟ್ ಲುಕ್ ನಲ್ಲಿ ಭೂಮಿ ಶೆಟ್ಟಿ ಮುಖವನ್ನು ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಅಲಂಕಾರಗೊಳಿಸಲಾಗಿದೆ. ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟು ದೈವಿಕ ಅನುಭವ ನೀಡುವ ಗೆಟಪ್ ನಲ್ಲಿ ಭೂಮಿ ಕಾಣಿಸಿಕೊಂಡಿದ್ದಾರೆ.
ಪ್ರಶಾಂತ್ ವರ್ಮಾ ತಮ್ಮದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿ ಮಹಾಕಾಳಿ ಚಿತ್ರ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು, ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ.
ಕಾಳಿ ಕಥೆ?
ಕಾಳಿ ಹಿನ್ನೆಲೆಯ ಕಥೆ
ಹಾಗಾದರೆ ಮಹಾಕಾಳಿ ಸಿನಿಮಾದಲ್ಲಿ ಏನಿರಲಿದೆ? ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ.
ಮಹಾಕಾಳಿ ಸಿನಿಮಾವನ್ನು ಆರ್‌ಕೆಎಂಡಿ ಸ್ಟುಡಿಯೋಸ್ ಬ್ಯಾನರ್ ಅಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾವನ್ನು ಭಾರತೀಯ ಭಾಷೆ ಮಾತ್ರವಲ್ಲದೆ ಇತರ ವಿದೇಶಿ ಭಾಷೆಗಳಲ್ಲಿಯೂ ಚಿತ್ರ ಮೂಡಿ ಬರಲಿದೆ. ಹನುಮಾನ್ ಸಿನಿಮಾ ಜಪಾನ್ ಹಾಗೂ ಇತರ ಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡಿತ್ತು.

