ಇದು ಕನ್ನಡದ ಮೊದಲ “ಸೂಪರ್ ಹೀರೋ” ಕಾನ್ಸೆಪ್ಟ್ ಚಿತ್ರ. .
ಪುಣ್ಯ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪವನ್ ಕುಮಾರ್ ನಿರ್ದೇಶನದ “ದಿ ಎಂಡ್” ಚಿತ್ರದ ಹಾಡೊಂದರ(ಹನುಮಾನ್ ಚಾಲೀಸ) ಲಿರಿಕಲ್ ವಿಡಿಯೋ ಮಹಾಶಿವರಾತ್ರಿಯ ಪುಣ್ಯದಿವಸ ಬಿಡುಗಡೆಯಾಯಿತು. ನಿರ್ಮಾಪಕರಾದ ಶಿಲ್ಪ ಶ್ರೀನಿವಾಸ್, ಮಂಜುನಾಥ್, ಧರ್ಮಶ್ರೀ ಮಂಜುನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ವೆಂಕಟೇಶ್ ಮುಂತಾದ ಗಣ್ಯರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಕನ್ನಡ ಪ್ರಥಮ ಸೂಪರ್ ಹೀರೋ ಕಾನ್ಸೆಪ್ಟ್ ನ ಚಿತ್ರ “ದಿ ಎಂಡ್”. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಕೇವಲ ಐದು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ವಿಶೇಷ ಪಾತ್ರದಲ್ಲಿ ನಟಿಸಲು ಅನಂತನಾಗ್ ಅವರ ಜೊತೆ ಮಾತುಕತೆ ನಡೆಯುತ್ತಿದೆ. ಹದಿನೆಂಟು ಪುರಾಣಗಳನ್ನು ಆಧರಿಸಿ ಮಾಡುತ್ತಿರುವ ಈ ಚಿತ್ರ, ಒಂಭತ್ತು ಭಾಷೆಗಳಲ್ಲಿ ಐದು ಭಾಗಗಳಲ್ಲಿ ಬರಲಿದೆ. ಇದು ಮೊದಲ ಭಾಗ.”ದಿ ಎಂಡ್” ಚಿತ್ರಕ್ಕೆ “PREAMBLE” ಎಂಬ ಅಡಿಬರಹವಿದೆ.”PREAMBLE” ಎಂದರೆ ಪೀಠಿಕೆ ಎಂದು ಅರ್ಥ. ಇನ್ನು ಸರ್ವಕಾಲಿಕ ಸೂಪರ್ ಹೀರೋ ಹನುಮಂತನ ಮಹಿಮೆಯನ್ನು ವರ್ಣಿಸುವ ಹನುಮಾನ್ ಚಾಲೀಸ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಮಹಾಶಿವರಾತ್ರಿ ಪುಣ್ಯದಿವಸ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಐದು ಪ್ರಸಿದ್ದ ಶಿವ ದೇಗುಲಗಳಲ್ಲಿ ಏಕಕಾಲಕ್ಕೆ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ಅರುಣ್ ಆಂಡ್ರ್ಯೂ ಸಂಗೀತ ನೀಡಿರುವ ಈ ಹಾಡನ್ನು ಮಧುಕುಮಾರ್ ಭಾವಪರವಶರಾಗಿ ಹಾಡಿದ್ದಾರೆ. ಅಂದುಕೊಂಡ ಹಾಗೆ ಆದರೆ “ದಿ ಎಂಡ್” ಇದೇ ಮೇ ವೇಳೆಗೆ ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕ ಪವನ್ ಕುಮಾರ್ ತಿಳಿಸಿದರು.
ಪವನ್ ಕುಮಾರ್ ಅವರು ಆಯ್ದುಕೊಂಡಿರುವ ಕಥೆ ಚೆನ್ನಾಗಿದೆ. ಸೂಪರ್ ಹೀರೋ ಎಂದರೆ ವಿಶೇಷ ಶಕ್ತಿಯುಳ್ಳವನು ಎಂದು. ಚಿತ್ರದಲ್ಲಿ ನಾನು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರವಿಶೇಖರ್.
ನಾಯಕಿ ಪವಿತ್ರ, ವಿಶೇಷ ಪಾತ್ರದಲ್ಲಿ ನಟಿಸಲಿರುವ ನಟಿ ಚೈತ್ರಾ ಕೊಟ್ಟೂರ್, ಸಂಗೀತ ನಿರ್ದೇಶಕ ಅರುಣ್ ಆಂಡ್ರ್ಯೂ, ಗಾಯಕ ಮಧುಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ದಿ ಎಂಡ್” ಕುರಿತು ಮಾತನಾಡಿದರು.