ಅರವತ್ತರ ದಶಕದ ಸುಮಧುರ ಹಾಡಿಗೆ ಹೆಜ್ಜೆ ಹಾಕಿದ ರೀಷ್ಮಾ ನಾಣಯ್ಯ.
ಆವವತ್ತರ ದಶಕದಲ್ಲಿ ಡಾ||ರಾಜ್ ಹಾಗೂ ಲೀಲಾವತಿ ಅಭಿನಯಿಸಿದ್ದ “ವೀರಕೇಸರಿ” ಚಿತ್ರದ “ಮೆಲ್ಲುಸಿರೆ ಸವಿಗಾನ” ಹಾಡನ್ನು “ಸ್ಪೂಕಿ ಕಾಲೇಜ್” ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. “ಏಕ್ ಲವ್ ಯಾ” ಚಿತ್ರದ ಖ್ಯಾತಿಯ ರೀಷ್ಮಾ ನಾಣಯ್ಯ ಈ ಸುಮಧುರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಿರಿಯ ನಿರ್ದೇಶಕ ಭಗವಾನ್, ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ ಹಾಗೂ ಪತ್ರಕರ್ತ ಬಿ.ಗಣಪತಿ ಅವರು ಈ ಹಾಡನ್ನು ಬಿಡುಗಡೆ ಮಾಡಿದರು.
ಆ ಕಾಲದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಈಗ ಹಾಗಲ್ಲ ತಂತ್ರಜ್ಞಾನ ಮುಂದುವರೆದಿದೆ. “ಮೆಲ್ಲುಸಿರೆ ಸವಿಗಾನ” ಹಾಡಿಗೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ ಅಭಿನಯ, ಭೂಷಣ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ನಿರ್ದೇಶಕ ಭರತ್ ನನ್ನ ಶಿಷ್ಯ. ಚಿತ್ರಕ್ಕೆ ಒಳ್ಳೆಯ ನಾಯಕಿ ಎಂದರು ಹಿರಿಯ ನಿರ್ದೇಶಕ ಭಗವಾನ್.
ಅರವತ್ತರ ದಶಕದ ಈ ಹಾಡನ್ನು ಈಗಿನ ರೀತಿಗೆ ಚಿತ್ರೀಕರಿಸುವುದು ಕಷ್ಟಸಾಧ್ಯ. ಅದರೆ ಅದನ್ನು ನಿರ್ದೇಶಕ ಭರತ್ ಸಾಧ್ಯವಾಗಿಸಿದ್ದಾರೆ ಎಂದು ಸಾಹಿತಿ ದೊಡ್ಡರಂಗೇಗೌಡ ತಿಳಿಸಿದರು.
ಈ ಹಾಡನ್ನು ದಾಂಡೇಲಿಯಲ್ಲಿ ಸುಮಾರು 250ಕ್ಕೂ ಅಧಿಕ ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರಿಸಿಕೊಳ್ಳಲಾಯಿತು. ಭೂಷಣ್ ಒಳ್ಳೆಯ ದಾಗ ಬಲಿ ನಿರ್ದೇಶನದಲ್ಲಿ ರೀಷ್ಮಾ ನಾಣಯ್ಯ ಈ ಹಾಡುಗೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಹಾಗೂ ಮನೋಹರ್ ಜೋಷಿ ಅವರ ಛಾಯಾಗ್ರಹಣ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶ್ವಾಸ್ ಕಲಾ ನಿರ್ದೇಶನ ಕೂಡ ಕಣ್ಮನ ಸೆಳೆಯುತ್ತದೆ. ಹಾಡು ಹಾಗೂ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರ ಸಹಕಾರ ಹಾಗೂ ನನ್ನ ಚಿತ್ರತಂಡದ ಶ್ರಮ ಕಾರಣ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಭರತ್ ಜಿ.
ಹಾಡಿನ ಬಗ್ಗೆ ರೀಷ್ಮಾ ನಾಣಯ್ಯ, ಚಿತ್ರದ ಬಗ್ಗೆ ನಾಯಕ ವಿವೇಕ್ ಸಿಂಹ, ನಾಯಕಿ ಖುಷಿ ರವಿ, ಛಾಯಾಗ್ರಾಹಕ ಮನೋಹರ್ ಜೋಷಿ ಮುಂತಾದವರು ಮಾತನಾಡಿದರು.