ಸಾಮಾನ್ಯವಾಗಿ ಫೆಬ್ರವರಿ ಶುರುವಾಯಿತೆಂದರೆ, ಸುಮುಹೂರ್ತಗಳು ಶುರುವಾಗುತ್ತದೆ. ಇದೇ ಫೆಬ್ರವರಿ 17 ರ ಶುಭದಿವಸ ನಡೆಯಲಿರುವ “ಸಿರಿ ಲಂಬೋದರ ವಿವಾಹ” ಕ್ಕೆ ತಾವು ಕುಟುಂಬ ಸಮೇತ ಆಗಮಿಸಬೇಕೆಂದು ವಿನಂತಿ.
ಹೌದು. ಸೌರಭ್ ಕುಲಕರ್ಣಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಂಪೂರ್ಣ ಮನೋರಂಜನಾತ್ಮಕ ಚಿತ್ರ “ಸಿರಿ ಲಂಬೋದರ ವಿವಾಹ” (ಎಸ್ ಎಲ್ ವಿ) ಚಿತ್ರ ಇದೇ ಹದಿನೇಳರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.
ಎರಡು ತಿಂಗಳ ಹಿಂದೆ ರಮೇಶ್ ಅರವಿಂದ್ ಅವರು ಟೀಸರ್ ಬಿಡುಗಡೆ ಮಾಡಿ, ಶುಭ ಕೋರಿದ್ದರು. ಆನಂತರ ನಮ್ಮ ಚಿತ್ರದ ಪ್ರೀಮಿಯರ್ ಹೊರದೇಶಗಳಲ್ಲಿ ನಡೆಯಿತು. ಅಲ್ಲಿನ ಜನ ನಮ್ಮ ಚಿತ್ರವನ್ನು ಮನಸಾರೆ ಮೆಚ್ಚಿ ಕೊಂಡರು. ಈಗ ಟ್ರೇಲರ್ ಬಿಡುಗಡೆಯಾಗಿದೆ. ಸಿಹಿಕಹಿ ಚಂದ್ರು, ಶಾಲಿನಿ, ಬೇಬಿ ವಂಶಿಕಾ ಸೇರಿದಂತೆ ಅನೇಕ ಗಣ್ಯರು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹಕ್ಕೆ ನಾನು ಆಭಾರಿ. ಫೆಬ್ರವರಿ ಹದಿನೇಳು ಚಿತ್ರ ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದ ನಿರ್ದೇಶಕ ಸೌರಭ್ ಕುಲಕರ್ಣಿ, ತಮ್ಮ ತಂಡಕ್ಕೆ ಧನ್ಯವಾದ ತಿಳಿಸಿದರು.
ವಿದೇಶದಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಮನ ತುಂಬಿ ಬಂದಿದೆ. ಇಲ್ಲೂ ಕೂಡ ಗೆಲ್ಲುವ ವಿಶ್ವಾಸವಿದೆ ಎನ್ನುತ್ತಾರೆ ನಾಯಕ ಅಂಜನ್ ಎ ಭಾರದ್ವಾಜ್.
ಚಿತ್ರ ಸಾಗಿ ಬಂದ ದಾರಿ ವಿವರಿಸಿದ ನಾಯಕಿ ದಿಶಾ ರಮೇಶ್, ಇದು ಉತ್ತಮ ಕಂಟೆಂಟ್ ವುಳ್ಳ ಚಿತ್ರ ಎಲ್ಲರೂ ನೋಡಿ ಎಂದರು.
ಇತ್ತೀಚಿಗೆ ಹೊಸಬರ ಚಿತ್ರ ಚೆನ್ನಾಗಿದ್ದರೂ ಜನ ಥಿಯೇಟರ್ ಹತ್ತಿರ ಬರುತ್ತಿಲ್ಲ. ಕೆಲವು ಚಿತ್ರತಂಡದವರು ಲೈವ್ ಮೂಲಕ ಜನರನ್ನು ಥಿಯೇಟರ್ ಗೆ ಬನ್ನಿ ಎಂದು ಕಣ್ಣೀರು ಹಾಕುತ್ತಾ ಕರೆಯುತ್ತಿದ್ದುದ್ದನ್ನು ಕಂಡು ಬೇಸರವಾಯಿತು. ಅ ಪರಿಸ್ಥಿತಿ ಈ ಚಿತ್ರಕ್ಕೆ ಬಾರದಿರಲಿ ಎಂದು ನಟ ರಾಜೇಶ್ ನಟರಂಗ ಹೇಳಿದರು. ನಟ ಸುಂದರ್ ವೀಣಾ ಸಹ ಇದೇ ಮಾತನ್ನು ಪುನರುಚ್ಚರಿಸಿದರು. ರೋಹಿತ್ ನಾಗೇಶ್ ಸಹ ಇದೊಂದು ಉತ್ತಮ ಚಿತ್ರ ಕುಟುಂಬ ಸಮೇತ ನೋಡಿ ಎಂದರು.
ಸಂಗೀತ ನಿರ್ದೇಶಕ ಸಂಘರ್ಷ್ ಕುಮಾರ್ ಹಾಗೂ ನಿರ್ಮಾಪಕಿ ನಮ್ರತ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.