ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ “ಸೈಮಾ” ಅವಾರ್ಡ್ಸ್ 2022 ಈ ಬಾರಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೆನಪಿನೊಂದಿಗೆ ಸೆಪ್ಟೆಂಬರ್ 10 ಹಾಗೂ 11ರಂದು
ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.
“SIIMA” 2022 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲು ಖುಷಿಯಾಗುತ್ತಿದೆ. ಇದು ಹತ್ತನೇ ವರ್ಷದ ಪ್ರಶಸ್ತಿ ಸಮಾರಂಭ ಕೂಡ. ಬೆಂಗಳೂರಿನಲ್ಲಿ “ಸೈಮಾ” ಅವಾರ್ಡ್ಸ್ ನಡೆಸಲು ಎರಡು ಪ್ರಮುಖ ಕಾರಣಗಳಿದೆ. ಒಂದು ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ. ಮತ್ತೊಂದು ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾ ದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ ಹಾಗಾಗಿ ಈ ಬಾರಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ಬಂದಿರುವ ಗಣ್ಯರಿಗೆ ಹಾಗೂ ಪ್ರಾಯೋಜಕರಿಗೆ ಧನ್ಯವಾದ ಎಂದರು “ಸೈಮಾ” ಅವಾರ್ಡ್ಸ್ ನ ಮುಖ್ಯಸ್ಥೆ ಬೃಂದಾ ಪ್ರಸಾದ್.
ಒಂದು ಪ್ರಶಸ್ತಿ ಸಮಾರಂಭವನ್ನು ಹತ್ತುವರ್ಷಗಳ ಕಾಲ ನಡೆಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ನಾನು ಮೊದಲು ಇದರ ಉಸ್ತುವಾರಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಈ ಬಾರಿ ಹತ್ತನೇ ವರ್ಷದ “ಸೈಮಾ” ಅವಾರ್ಡ್ಸ್ ನನಗೆ ಪ್ರಿಯವಾದ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖಷಿ ಎನ್ನುತ್ತಾರೆ ಖ್ಯಾತ ನಟ ರಾಣಾ ದಗ್ಗುಬಾಟಿ.
ನನಗೆ “ಸೈಮಾ” ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾ ಗೆ ಹೋಗಿದ್ದು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ನಿಮ್ಮೆಲ್ಲರಿಗೂ ನಮ್ಮೂರಿಗೆ ಆತ್ಮೀಯ ಸ್ವಾಗತ. ಪದೇಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ ಎಂದು ನಟ ಡಾಲಿ ಧನಂಜಯ ಹಾರೈಸಿದರು.
ನನಗೆ ಬೆಂಗಳೂರು ತುಂಬಾ ಇಷ್ಟ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ.. ಚಿತ್ರೀಕರಣ ಸಮಯದಲ್ಲಿ ಹಲವು ದಿನಗಳನ್ನು ಇಲ್ಲೇ ಕಳೆದಿದ್ದೇನೆ. ಈ ಬಾರಿ ಅಪ್ಪು ಅವರ ಸ್ಮರಣೆಯೊಂದಿಗೆ ಈ ಸಮಾರಂಭ ನಡೆಯುತ್ತಿದೆ ಎಂದು ನಟಿ ಶಾನ್ವಿ ಶ್ರೀವಾಸ್ತವ್ ತಿಳಿಸಿದರು.
ನಟಿಯರಾದ ಫರಿಯಾ ಅಬ್ದುಲ್ಲಾ, ಶ್ರೀಲೀಲ ಹಾಗೂ ಕೆಲವು ಪ್ರಾಯೋಜಕರು ಸಹ “ಸೈಮಾ” ಬಗ್ಗೆ ಮಾತನಾಡಿದರು.