Kannada Beatz
News

ಕಲಾವಿದರ ಕತ್ತಲ ಬದುಕನ್ನು ಅನಾವರಣಗೊಳಿಸಿದ ಅಣ್ತಮ್ಮ…

ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ಕೊರೋನಾ ಎನ್ನುವ ದುಷ್ಟ ವೈರಸ್ಸು ಅಂಥ ಎಲ್ಲರ ಬದುಕನ್ನೂ ಅಕ್ಷರಶಃ ನರಕವನ್ನಾಗಿಸಿದೆ.


ಸಿನಿಮಾ ರಂಗಕ್ಕೆ ಸಂಬಂಧಿಸಿದ ಸಾಕಷ್ಟು ಜನ ಬಡ ಕಲಾವಿದರ ಮನೆಯ ಗೋಡೆಯನ್ನು ಶ್ರೀಮಂತವಾಗಿರಿಸಿರುವುದು ಅವರು ದೊಡ್ಡ ಕಲಾವಿದರ ಜೊತೆಗೆ ತೆಗೆಸಿಕೊಂಡ ಫೋಟೋಗಳು ಮಾತ್ರ. ಮಿಕ್ಕಂತೆ, ಬಡತನ ಅವರ ಬದುಕನ್ನು ಇಂಚಿಂಚಾಗಿ ಕಿತ್ತು ತಿನ್ನುತ್ತಿದೆ. ಸದ್ಯ ಕೊರೋನಾ ಸಂಕಷ್ಟದಿಂದ ಹೆತ್ತ ಮಕ್ಕಳಿಗೆ ಹೊಟ್ಟೆ ತುಂಬ ಊಟ ಹೊಂಚುವುದೂ ಕಷ್ಟಕರವಾಗಿದೆ. ಮಡದಿಯ ತಾಳಿಯನ್ನೂ ಅಡವಿಟ್ಟು ದಿನಸಿ ತಂದವರು ಅದೆಷ್ಟೋ ಮಂದಿ. ಮನೆ ಬಾಡಿಗೆ ಕಟ್ಟಲು ಕೂಡಾ ಹಣವಿಲ್ಲದೆ ಹೆಣಗಾಡುತ್ತಿದ್ದಾರೆ ಇನ್ನಷ್ಟು ಜನ.
ಇಂಥ ಎಷ್ಟೋ ಜನರ ಬಾಳಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಬೆಳಕು ಮೂಡಿಸಿದ್ದಾರೆ. ಮೂರು ಸಾವಿರದ ಇನ್ನೂರು ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರಿಗೆ ಯಶ್ ಸಂದಾಯ ಮಾಡಿರುವ ತಲಾ ಐದು ಸಾವಿರ ರುಪಾಯಿಗಳು ಹಸಿದ ಹೊಟ್ಟೆಗೆ ಅನ್ನದ ದಾರಿ ಮಾಡಿರುವುದರ ಜೊತೆಗೆ ನೊಂದ ಮನಸ್ಸುಗಳಿಗೆ ಸಮಾಧಾನ ನೀಡಿದೆ.


ಈ ವಿಚಾರಕ್ಕೆ ಸಂಬಂಧಿಸಿದಂತೆ ನೈಜ ಘಟನೆಯನ್ನು ಆಧರಿಸಿ ನಟ, ಪತ್ರಕರ್ತ ಯತಿರಾಜ್ ತಮ್ಮ ಕಲಾವಿದ ಫಿಲ್ಮ್ ಅಕಾಡೆಮಿ ಮೂಲಕ ʻಅಣ್ತಮ್ಮʼ ಎನ್ನುವ ಚೊಕ್ಕದಾದ ಕಿರುಚಿತ್ರವೊಂದನ್ನು ರೂಪಿಸಿದ್ದಾರೆ. ಈ ಚಿತ್ರದ ಕಥಾವಸ್ತು ಎಂಥವರ ಮನಸ್ಸನ್ನೂ ಭಾರವಾಗಿಸುತ್ತದೆ. ಜೊತೆಗೆ, ರಾಕಿಭಾಯ್ ಯಶ್ ಅವರ ಬಗೆಗಿನ ಅಭಿಮಾನ ನೂರ್ಮಡಿಗೊಳಿಸುತ್ತದೆ.
ಯತಿರಾಜ್ ನಟಿಸಿ, ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ, ಭಾರತಿ, ಗುರು, ಅಜಯ್ ಗೌಡ, ತ್ರಿಷಿಕಾ, ನಮ್ರತ, ಸ್ಮೃತಿ ಮುಂತಾದವರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಸಾವಿರಾರು ಸಿನಿಮಾಗಳ ಪತ್ರಿಕಾ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಾ ಮುಂಚೂಣಿಯಲ್ಲಿರುವವರು ಸುಧೀಂದ್ರ ವೆಂಕಟೇಶ್. ಇದೇ ಮೊದಲ ಬಾರಿಗೆ ಅವರೂ ಸಹ ಅಣ್ತಮ್ಮ ಕಿರುಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಮಾರುತಿ ಮೀರಜ್ಕರ್ ಸಂಗೀತವಿರುವ ಅಣ್ತಮ್ಮ ಕಿರುಚಿತ್ರಕ್ಕೆ ಸೋನು ಸಾಗರ್ ಛಾಯಾಗ್ರಹಣದ ಜೊತೆಗೆ ಸಂಕಲನ ಕೂಡಾ ಮಾಡಿದ್ದಾರೆ.

Related posts

ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಅನೂಪ್ ರೇವಣ್ಣ – ‘ಹೈಡ್ ಅಂಡ್ ಸೀಕ್’ ಪೋಸ್ಟರ್ ಲಾಂಚ್

Kannada Beatz

ನಟ ಶರಣ್ ಅವರಿಂದ “ಜಲಂಧರ” ಚಿತ್ರದ “ಸಂತೆಯ ದಾರಿಯಲ್ಲಿ” ಹಾಡಿನ ಅನಾವರಣ .

Kannada Beatz

ಸೆಂಚುರಿ ಸ್ಟಾರ್ ಬಿಡುಗಡೆ ಮಾಡಿದರು “ಗಿರ್ಕಿ” ಮೋಷನ್ ಪೋಸ್ಟರ್.

Kannada Beatz

Leave a Comment

Share via
Copy link
Powered by Social Snap