ನಟನೆ ಅನ್ನೋದು ಕೆಲವರಿಗೆ ರಕ್ತದಲ್ಲೇ ಇರುತ್ತೇ… ಮತ್ತೆ ಕೆಲವರಿಗೆ ರಕ್ತಗತವಾಗಿ ಬರುತ್ತೇ.. ನಾವೀಗ ಹೇಳ್ತಾ ಇರೋದು ರಕ್ತಗತವಾಗಿ ಕಲೆಯನ್ನು ಮೈಗೂಡಿಸಿಕೊಂಡು.. ಸಿನಿಮಾ ಲೋಕದಲ್ಲಿ ಸವಾರಿ ಮಾಡುತ್ತಿರುವ.. ಸಿನಿಮಾ ಕನಸುಗಳನ್ನು ಕಾಣುತ್ತಿರುವ ಪ್ರತಿಭಾನ್ವಿತ ನಿರ್ದೇಶಕ ಸಂಗಮೇಶ ಎಸ್ ಸಜ್ಜನರ್ ಅವರ ಬಗ್ಗೆ. ಮೂಲತಃ ಬಿಸಿಲನಗರಿ ರಾಯಚೂರಿನವರಾದ ಸಜ್ಜನ್ ಅವರ ತಂದೆ ನಾಟಕ ನಿರ್ದೇಶಕರಾಗಿ ಚಾಪೂ ಮೂಡಿಸಿದವರು.
ಅವರ ದೊಡ್ಡಪ್ಪ ನಟನೆಯಲ್ಲಿ ನಿಪೂಣರು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಂತಹ ದಿ ಗ್ರೇಟ್ ಡೈರೆಕ್ಟರ್ ಸಜ್ಜನ್ ಅವರ ದೊಡ್ಡಪ್ಪನಿಗೆ ನಟಿಸುವ ಅವಕಾಶದ ಕರೆ ನೀಡಿದ್ದರು ಅಂದ್ರೆ ಅವರ ಕಲಾಕೌಶಲ್ಯತೆ ಬಗ್ಗೆ ಹೇಳೋದೇ ಬೇಡ. ಇಂತಹ ಕುಟುಂಬದಿಂದ ಬಂದ ಸಜ್ಜನ್ ಎಂಕಾಮ್ ಮುಗಿಸಿಕೊಂಡು, ಸಿನಿಮಾ ರಂಗದತ್ತ ಮುಖ ಮಾಡಿದರು. ಆಗಲೇ ಮಂತ್ರ ಎಂಬ ವಿಶೇಷ ಬಗೆಯ ಸಿನಿಮಾ ಜನ್ಮ ತಾಳಿದ್ದು.ಮಂತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಅದೃಷ್ಟ ಪರೀಕ್ಷೆಗಳಿದ ಸಜ್ಜನ್ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದರು, ನಿರ್ಮಾಪಕರ ಬಂಡವಾಳಕ್ಕೆ ತಕ್ಕ ಲಾಭ, ಪ್ರೇಕ್ಷಕ ಬಯಸಿದಂತ ಸಿನಿಮಾ ನೀಡಿ, ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರಾಗಿ ಕಂಡರು.
ಆದರೆ ಮಂತ್ರ ಸಿನಿಮಾ ಬಿಡುಗಡೆಯ ನಂತರ ಅವರಿಗೆ ಪತ್ರಿಕೋದ್ಯಮ ಕೈಬೀಸಿ ಕರೆದಿತ್ತು, ವಾಹಿನಿಯೊಂದರಲ್ಲಿ ಮೂರು ವರ್ಷಗಳ ಕಾಲ ಜವಾರಿ ನ್ಯೂಸ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಯಶಸ್ವಿನಿರೂಪಕ,ವರದಿಗಾರನಾಗಿ ಸೇವೆ ಸಲ್ಲಿಸಿದ ಸಜ್ಜನ್ ಗೆ ಸಿನಿಮಾ ರಂಗ ಮತ್ತೆ ಕೈ ಬೀಸಿ ಕರೆಯಿತು. ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿರುವ ಸಜ್ಜನ್ ಕೆಲವು ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆಯ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದುಬಂದ ಈ ಪ್ರತಿಭೆ. ಸದ್ಯ ಸಜ್ಜನ್ ಫೋರ್ ವಾಲ್ಸ್ ಎನ್ನುವ ಸಿನಿಮಾವನ್ನು ನಿರ್ದೇಶಿಸಿ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.
ಕಮರ್ಶಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಬೇಸ್ಡ್ ಸಿನಿಮಾಗಳ ಸವಿಯನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು ಎಂಬ ಉದ್ದೇಶದಿಂದ ಫೋರ್ ವಾಲ್ಸ್’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಸಜ್ಜನ್ ಅವರದ್ದೇ. ಹಲವು ವಿಶೇಷತೆಗಳಿಂದ ಕೂಡಿರುವ ಫೋರ್ ವಾಲ್ಸ್ ಸಿನಿಮಾದ ಸ್ಯಾಂಪಲ್ಸ್ ನೋಡಿ ಗಾಂಧಿನಗರದ ಮಂದಿ ಮೆಚ್ಚಿಕೊಂಡಿದ್ದಾರೆ.
ತಂದೆ ಮಗನ ಬಾಂದವ್ಯದ ಸುತ್ತ ಹೆಣೆಯಲಾದ ಫೋರ್ ವಾಲ್ಸ್ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮೂರು ಶೇಡ್ ನಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಡಾ. ಪವಿತ್ರಾ ಬಣ್ಣ ಹಚ್ಚಿದ್ದು, ದತ್ತಣ್ಣ, ಡಾ.ಜಾನ್ವಿ ಜ್ಯೋತಿ, ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ ತಾರಾಬಳಗದಲ್ಲಿದ್ದಾರೆ. ತೆಲುಗಿನ ರುದ್ರಮದೇವಿ, ಗರುಡವೇಗ ಸಿನಿಮಾಗಳಲ್ಲಿ ದುಡಿದ ಅನುಭವ ಇರುವ ವಿಡಿಆರ್ ಕ್ಯಾಮೆರಾ ವರ್ಕ್, ಆನಂದ ರಾಜಾವಿಕ್ರಮ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಕೋಟೆನಾಡು ಚಿತ್ರದುರ್ಗದವರಾವರಾದ ಟಿ ವಿಶ್ವನಾಥ್ ನಾಯಕ್
ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಆಸಕ್ತಿ ಇದ್ದು. ಕಲಾವಿದರಾಗಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸ್ವತಂತ್ರ ನಿರ್ಮಾಪಕರಾಗಿ ‘ಫೋರ್ ವಾಲ್ಸ್’ ಚಿತ್ರವನ್ನು ಎಸ್.ವಿ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ.
ಫೋರ್ ವಾಲ್ಸ್ ಸಿನಿಮಾದ ಜೊತೆಗೆ
ಮೃತ್ಯುಂಜಯ ಎಂಬ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿರುವ ಸಜ್ಜನ್ ಬಯೋಪಿಕ್ ವೊಂದನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಸಿನಿಮಾಗಳ ತಾಕತ್ತು ಏನು ಅನ್ನೋದನ್ನು ಸಾರಿ ಹೇಳಲು ಸಜ್ಜನ್ ಅವರಂತಹ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬೇಕು.