ಬೆಂಗಳೂರಿನ ಪ್ರಸಿದ್ದ ಬಡಾವಣೆಯ ಹೆಸರೆ ಈಗ ಚಿತ್ರದ ಶೀರ್ಷಿಕೆ .
ಬಹುಶಃ “ಎಲೆಕ್ಟ್ರಾನಿಕ್ ಸಿಟಿ” ಎಂಬ ಹೆಸರನ್ನು ಕೇಳದವರು ಯಾರು ಇಲ್ಲ ಎನ್ನಬಹುದು. ಅದರಲ್ಲೂ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವರಿಗಂತೂ ಈ ಹೆಸರು ಚಿರಪರಿಚಿತ.
ಬೆಂಗಳೂರಿನ ಈ ಸುಪ್ರಸಿದ್ಧ ಬಡಾವಣೆಯಲ್ಲಿ ಸಾಕಷ್ಟು ಐಟಿ ಕಂಪನಿಗಳಿದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗಿದ್ದು, ನವೆಂಬರ್ 24 ರಂದು ತೆರೆಗೆ ಬರುತ್ತಿದೆ.
ಮೂಲತಃ ಐಟಿ ಉದ್ಯೋಗಿಯಾಗಿರುವ ಆರ್ ಚಿಕ್ಕಣ್ಣ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶಿಸಿದ್ದಾರೆ. ಈವರೆಗೂ ಕೆಲವು ಕಿರುಚಿತ್ರಗಳನ್ನು ಚಿಕ್ಕಣ್ಣ ನಿರ್ದೇಶಿಸಿದ್ದಾರೆ.
ಈಗಿನ ಬಹುಪಾಲು ಯುವಕರು ಐಟಿ ಉದ್ಯೋಗಿಗಳಾಗಿದ್ದು, ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಅಂತಹ ಐಟಿ ಕಂಪನಿಯ ಉದ್ಯೋಗಿಯ ವರ್ಕ್ ಲೈಫ್ ಹೇಗಿರುತ್ತದೆ? ಎಂಬ ಪ್ರಮುಖ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತ್ರಿಕೋನ ಪ್ರೇಮ ಕಥೆ ಸಹ ಇದೆ. “ಎಲೆಕ್ಟ್ರಾನಿಕ್ ಸಿಟಿ” ಈಗಾಗಲೇ ಅನೇಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನವೆಂಬರ್ 24 ಚಿತ್ರ ಬಿಡುಗಡೆಯಾಗುತ್ತಿದೆ.
ಆರ್ಯನ್ ಹರ್ಷ “ಎಲೆಕ್ಟ್ರಾನಿಕ್ ಸಿಟಿ ಚಿತ್ರದ ನಾಯಕನಾಗಿದ್ದು, ದಿಯಾ ಆಶ್ಲೇಶ, ರಕ್ಷಿತ ಕೆರೆಮನೆ ನಾಯಕಿಯರಾಗಿ ನಟಿಸಿದ್ದಾರೆ. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಚಂದ್ರಶೇಖರ್ ಶ್ರೀವಾಸ್ತವ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ರಾಜ ಶಿವಶಂಕರ್ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ ಹಾಗೂ ಹಂಪಿ ಸುಂದರ್ ಅವರ ಕಲಾ ನಿರ್ದೇಶನ “ಎಲೆಕ್ಟ್ರಾನಿಕ್ ಸಿಟಿ” ಚಿತ್ರಕ್ಕಿದೆ.