HomeNewsಮಂಡ್ಯಹೈದನ ಮಾಸ್ ಟ್ರೈಲರ್

ಮಂಡ್ಯಹೈದನ ಮಾಸ್ ಟ್ರೈಲರ್

ಬಿಗ್‌ಬಾಸ್ ಕಾರ್ತೀಕ್‌ ಮಹೇಶ್- ಮಂಡ್ಯ ಶಾಸಕ ರವಿಕುಮಾರ್‌ಗೌಡ, ಪುಟ್ಟರಾಜು ಬಿಡುಗಡೆ

ಮಂಡ್ಯ ಭಾಗದ ಕಥೆಗಳು ಯಾವತ್ತೂ ಸೌಂಡ್ ಮಾಡುತ್ತಲೇ ಬಂದಿವೆ. ಅದೇರೀತಿ ಈಗ ಮತ್ತೊಂದು ಚಿತ್ರ ಸುದ್ದಿಯಲ್ಲಿದೆ. ಆ ಚಿತ್ರದ ಹೆಸರೇ ಮಂಡ್ಯಹೈದ. ಅಭಯ್ ಚಂದ್ರಶೇಖರ್ ನಾಯಕನಾಗಿ ನಟಿಸಿರುವ ಮಂಡ್ಯ ಗ್ರಾಮೀಣ ಶೈಲಿಯ ಸಾಹಸಮಯ ಪ್ರೇಮಕಥೆ ಇರುವ ಈ ಚಿತ್ರ ಇದೇ ತಿಂಗಳ ೧೬ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬುಧವಾರ ಸಂಜೆ ಎಸ್.ಆರ್.ವಿ. ಥಿಯೇಟರಿನಲ್ಲಿ ನೆರವೇರಿತು.

ಈ ವರ್ಷದ ಬಿಗ್‌ಬಾಸ್ ವಿಜೇತ ಕಾರ್ತೀಕ್ ಮಹೇಶ್, ಮಂಡ್ಯ ಶಾಸಕ ರವಿಕುಮಾರ್‌ಗೌಡ ಹಾಗೂ ನಿರ್ಮಾಪಕ ಪುಟ್ಟರಾಜು ಸೇರಿ ಮಂಡ್ಯ ಹೈದನ ಟ್ರೈಲರನ್ನು ಬಿಡುಗಡೆ ಮಾಡಿದರು.
ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಹಸಿ ಯುವಕನೊಬ್ಬ ಏನೇನೆಲ್ಲ ಸಾಹಸ ಕಾರ್ಯ ಮಾಡುತ್ತಾನೆ ಎಂದು ಈ ಚಿತ್ರ ಹೇಳುತ್ತದೆ, ಯುವನಟ ಅಭಯ್ ಚಂದ್ರಶೇಖರ್ ಮಂಡ್ಯದ ಹೈದನಾಗಿ ಕಾಣಿಸಿಕೊಂಡಿದ್ದು, ಭೂಮಿಕಾ ಭೂಮೇಶ್‌ಗೌಡ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದ, ಅಭಯ್, ತಮ್ಮ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ವಿ.ಶ್ರೀಕಾಂತ್ ಆಕ್ಷನ್ ಕಟ್ ಹೇಳಿದ್ದಾರೆ.


ಶಾಸಕ ರವಿಕುಮಾರ್‌ಗೌಡ ಮಾತನಾಡುತ್ತ ಅಭಯ್ ನಮ್ಮೂರಿನ ಹುಡುಗ, ನಮ್ಮ ಭಾಗದಲ್ಲಿ ಸಿನಿಮಾ ನೋಡೋರ ಸಂಖ್ಯೆ ಜಾಸ್ತಿ. ಮಂಡ್ಯದಿಂದ ಬಂದ ಸಾಕಷ್ಟು ಜನ ಸಿನಿಮಾ, ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ, ಮಂಡ್ಯ ಜನರ ರಕ್ತದಲ್ಲೇ ಸಿನಿಮಾ ಇದೆ. ಯಾವುದೇ ಸಿನಿಮಾ ಮಂಡ್ಯದಲ್ಲಿ ಗೆದ್ರೆ, ಅದು ಇಡೀ ಇಂಡಿಯಾದಲ್ಲೇ ಗೆಲ್ಲುತ್ತೆ ಅನ್ನೋ ಮಾತಿದೆ. ನಾಯಕ ಅಭಯ್ ಅದ್ಭುತವಾಗಿ ಅಭಿನಯಿಸಿದ್ದಾನೆ. ಆತನಿಗೆ ಮುಂದೆ ಉತ್ತಮ ಭವಿಷ್ಯವಿದೆ. ನಮ್ಮ ಜನ ಹೆಚ್ಚಾಗಿ ಫೈಟ್ಸ್, ಕಾಮಿಡಿ ಇಷ್ಟಪಡುತ್ತಾರೆ, ಅವೆರಡೂ ಈ ಚಿತ್ರದಲ್ಲಿದೆ, ಮಂಡ್ಯದಲ್ಲೇ ಈ ಚಿತ್ರದ ಶತದಿನ ಸಮಾರಂಭವನ್ನು ಆಚರಿಸೋಣ ಎಂದು ಶುಭ ಹಾರೈಸಿದರು.
ನಂತರ ಬಿಗ್ ಬಾಸ್ ಕಾರ್ತೀಕ್‌ ಮಹೇಶ್ ಮಾತನಾಡುತ್ತ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಅಟೆಂಡ್ ಮಾಡುತ್ತಿರುವ ಮೊದಲ ಇವೆಂಟ್ ಇದು, ನಾನು ಕೂಡ ಹಿಂದೆ ಡೊಳ್ಳು ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದೆ, ಈ ಚಿತ್ರದ ಟ್ರೈಲರ್ ತುಂಬಾ ಚೆನ್ನಾಗಿದೆ. ಅಭಯ್ ನನ್ನ ಸ್ನೇಹಿತ, ಆತನಲ್ಲಿ ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ. ನಾನು ಕೂಡ ಮೈಸೂರಿನವನು. ಹುಟ್ಟಿದ್ದ ಚಾಮರಾಜನಗರದಲೇ ಆದರೂ ಬೆಳೆದಿದ್ದೆಲ್ಲ ಮೈಸೂರಲ್ಲೇ. ಚಿತ್ರತಂಡಕ್ಕೆ ಒಳ್ಳೇದಾಗಲಿ ಎಂದು ಹಾರೈಸಿದರು.
ಮತ್ತೊಬ್ಬ ಅತಿಥಿ ಪುಟ್ಟರಾಜು ಮಾತನಾಡಿ ನಿರ್ಮಾಪಕರ ೫ನೇ ಚಿತ್ರ ಇದು, ಅವರು ಇನ್ನೂ ೫೦ ಸಿನಿಮಾ ಮಾಡುವಂತಾಗಲಿ ಎಂದು ಶುಭ ಕೋರಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಚಿತ್ರದಲ್ಲಿ ಮೂರು ಭರ್ಜರಿ ಆಕ್ಷನ್ ಇದೆ. ಅಭಯ್ ತುಂಬಾ ಲವಲವಿಕೆಯಿಂದ ಆಕ್ಟ್ ಮಾಡಿದ್ದಾರೆ ಎಂದರು. ನಿರ್ಮಾಪಕ ಚಂದ್ರಶೇಖರ್ ಮಾತನಾಡಿ ನಮ್ಮ ಶಾಸಕರು, ಕಾರ್ತೀಕ್ ತುಂಬಾ ಬ್ಯುಸಿ ಇದ್ದರೂ ಬಂದು ಹರಸಿದರು. ವೆಂಕಟ್ ಗೌಡ್ರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ಎಂದರು. ನಾಯಕ ಅಭಯ್ ಮಾತನಾಡಿ ನಾನು ಶಿವ ಎಂಬ ಪಾತ್ರ ಮಾಡಿದ್ದು, ಸ್ನೇಹ, ಸ್ನೇಹಿತರಿಗೆ ಬೆಲೆಕೊಡ್ತಾನೆ.ಅಂಥವರ ನಡುವೆ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಹೇಗೆ ಬರುತ್ತೆ, ನಂತರ ಏನಾಗುತ್ತೆ ಅನ್ನೋದೇ ಮಂಡ್ಯ ಹೈದ ಎಂದರು. ನಾಯಕಿ ಭೂಮಿಕಾ ಭೂಮೇಶ್, ನಿರ್ದೇಶಕ ಶ್ರೀಕಾಂತ್, ವಿತರಕ ವೆಂಕಟ್ ಗೌಡ ಚಿತ್ರದ ಕುರಿತಂತೆ ಮಾತನಾಡಿದರು.
ತೇಜಸ್ ಕ್ರಿಯೇಶನ್ಸ್ ಮೂಲಕ ಚಂದ್ರಶೇಖರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಮನುಗೌಡ ಕೆಲಸ ಮಾಡಿದ್ದಾರೆ, ಬಲ ರಾಜವಾಡಿ, ಖಳನಟ ವಿಷ್ಣು ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಅವರೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap