ಒಂದಷ್ಟು ಸಿನಿಮೋತ್ಸಾಹಿಗಳ ಯುವ ತಂಡ ಸೇರಿ ತಯಾರಿಸಿರುವ ಕಂಬ್ಳಿಹುಳ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ. ಜಾರೀ ಬಿದ್ದರೂ ಯಾಕೀ ನಗು ಎಂಬ ಸಾಹಿತ್ಯದ ಸಿಂಗಿಂಗ್ ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತಿದೆ. ಎರಡು ಮುದ್ದಾದ ಜೋಡಿಯ ನವೀರಾದ ಪ್ರೇಮಕಥೆಯನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಮಹದೇವ್ ಸ್ವಾಮಿ, ರವಿ ಧನ್ಯನ್ ಸಾಹಿತ್ಯದ ಹಾಡಿಗೆ ವಿಜಯ್ ಪ್ರಕಾಶ್-ಸಂಗೀತ ರವೀಂದ್ರನಾಥ್ ಧ್ವನಿಯಾಗಿದ್ದು, ಶಿವ ಪ್ರಸಾದ್ ಸಂಗೀತ ಹಾಡಿನಲ್ಲಿ ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಜೋಡಿ ಸಹಜ ನಟನೆ ಮೂಲಕ ಗಮನಸೆಳೆಯುತ್ತಾರೆ. ರೇಣುಕಾಂಬ ಸ್ಟುಡಿಯೋದಲ್ಲಿ ಈ ಹಾಡು ಬಿಡುಗಡೆ ಕಾರ್ಯಕ್ರಮ ಜರುಗಿತು. ಈ ವೇಳೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿದೆ.
ನಿರ್ದೇಶಕ ನವನ್ ಶ್ರೀನಿವಾಸ್ ಮಾತನಾಡಿ, ಕಿರುಚಿತ್ರದಿಂದ ಆರಂಭವಾದ ನನ್ನ ಜರ್ನಿ ಈಗ ಕಂಬ್ಳಿಹುಳ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಮಲೆನಾಡಿ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಚಿತ್ರವಿದು. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತಾ ಶೂಟಿಂಗ್ ಮಾಡಿದ್ದೇವೆ. ಇದೊಂದು ಎಮೋಷನಲ್ ಜರ್ನಿ. ಎರಡು ಕಾಲು ಘಂಟೆ ನಗು, ಅಳು, ಕಾಮಿಡಿ ಎಲ್ಲವೂ ಇದೆ ಎಂದರು.
ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ತಯಾರಾಗಿರುವ ಈ ಚಿತ್ರಕ್ಕೆ ನವನ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಹಿಂದೆ ಕಿರುಚಿತ್ರಗಳ ಮೂಲಕ ನಿರ್ದೇಶನದ ಚಾಕಚಕತ್ಯೆ ಅರಿತಿರುವ ನವನ್ ಕಂಬ್ಳಿಹುಳ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ನೈಜ ಘಟನೆಯಾಧಾರಿತ ಸಿನಿಮಾವಾಗಿರುವ ಕಂಬ್ಳಿಹುಳ ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು ಬಂಡವಾಳ ಹೂಡಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ ಸಿನಿಮಾಕ್ಕಿದೆ.