HomeNewsಎಲ್ಲಾ ಕಡೆ "ಹೆಡ್ ಬುಷ್" ಆರ್ಭಟ

ಎಲ್ಲಾ ಕಡೆ “ಹೆಡ್ ಬುಷ್” ಆರ್ಭಟ

ಕನ್ನಡ ಚಿತ್ರರಂಗದ ರೌಡಿಸಂ ಸಿನಿಮಾಗಳ ಪೈಕಿ ಹೆಚ್ಚು ಸದ್ದು ಮಾಡಿದ್ದು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಓಂ’ ಸಿನಿಮಾ. ಈ ಸಿನಿಮಾ ನಂತರ ಕನ್ನಡ ಚಿತ್ರರಂಗದಲ್ಲಿ ಹತ್ತೂ ಹಲವು ರೌಡಿಸಂ ಸಿನಿಮಾಗಳು ಬಂದವೆ. ಹಲವಾರು ನಿಜ ಜೀವನದ ರೌಡಿಸಂ ಕಥೆ ಆಧರಿತ ಚಿತ್ರಗಳೂ ಸಹ ಮೂಡಿಬಂದಿವೆ. ಅವುಗಳಲ್ಲಿ “ಆ ದಿನಗಳು, ಡೆಡ್ಲಿ ಸೋಮ, ಸ್ಲಂ ಬಾಲ, ಎದೆಗಾರಿಕೆ, ಜೋಗಿ” ಯಂತಹ ಚಿತ್ರಗಳು ಭೂಗತ ಜಗತ್ತನ್ನು ಬೆಳ್ಳಿ ಪರದೆಯ ಮೇಲೆ ಬಿಂಬಿಸಿವೆ. ಈಗ ಲೇಖಕ ಕಮ್ ಪತ್ರಕರ್ತ ಅಗ್ನಿ ಶ್ರೀಧರ್ ಅವರ ರಚನೆಯ ಎದೆಗಾರಿಕೆ, ಆ ದಿನಗಳು, ಕಳ್ಳರ ಸಂತೆ ಸಿನಿಮಾಗಳ ಸಾಲಿಗೆ “ಹೆಡ್ ಬುಷ್” ಹೊಸ ಸೇರ್ಪಡೆ!

‘ಹೆಡ್‌ ಬುಷ್‌’ ಸಿನಿಮಾ ಅಗ್ನಿ ಶ್ರೀಧರ್‌ ಅವರ “ಮೈ ಡೇಸ್ ಇನ್ ಅಂಡರ್ವರ್ಲ್ಡ್” ಎನ್ನುವ ಪುಸ್ತಕ ಆಧಾರಿತ ನೈಜ ಘಟನೆ. ಬೆಂಗಳೂರು ಭೂಗತ ಜಗತ್ತಿನ ದೊರೆ ‘ಎಂ.ಪಿ ಜಯರಾಜ್‌’ ಅವರ ಬಯೋಪಿಕ್ ಅನ್ನು ಸಿನಿಮಾವಾಗಿಸಿ ತೆರೆ ಮೇಲೆ ತರಲಾಗಿದೆ. ಈ ಚಿತ್ರದಲ್ಲಿ ಜಯರಾಜ್ ಅವರ ಪಾತ್ರದಲ್ಲಿ ನಟ ಡಾಲಿ ಧನಂಜಯ್‌ ಪ್ರೇಕ್ಷಕ‌ನ ನೆನಪಿನಲ್ಲಿ ಉಳಿಯುತ್ತಾರೆ. ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸಿದ್ದು, ಅಗ್ನಿ ಶ್ರೀಧರ್ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಗಮನ ಸೆಳೆಯುವಂತಿದೆ.

ಸುಮಾರು 1970ರ ಅರಸು ಕಾಲಘಟ್ಟದ ರಾಜಕೀಯ, ಆಡಳಿತಾತ್ಮಕ ವ್ಯವಸ್ಥೆ ಚಿತ್ರದಲ್ಲಿದೆ. ಇದರೊಂದಿಗೆ ಅಂದಿನ ಭೂಗತ ಜಗತ್ತನ್ನು ಇಂದಿನ ಜನರಿಗೆ ತೋರಿಸು ಪ್ರಯತ್ನ. ಸಿನಿಮಾ ನೋಡುವ ಪ್ರೇಕ್ಷಕನ ಅಭಿರುಚಿಗಳು ಬದಲಾದ ಕಾಲಘಟಕ್ಕೆ ತಕ್ಕಂತೆ ಸಿನಿಮಾ ಜಗತ್ತು ಸಹ ಬದಲಾವಣೆಯ ಹಾದಿಯನ್ನು ಹಿಡಿಯುತ್ತಿರುವುದು ಸಂತಸದ ವಿಷಯ. ಅಗ್ನಿ ಶ್ರೀಧರ್ ಅವರ ಆತ್ಮಕಥೆಯನ್ನು ಓದುತ್ತಾ ಹೋದಂತೆಲ್ಲಾ ಭೂಗತ ಜಗತ್ತಿನ ನಂಟಿರುವ ವ್ಯಕ್ತಿಗಳ ಚಿತ್ರಣ ಎಂದೆನಿಸುತ್ತದೆ. ಅದರ ಆಳಕ್ಕೆ ಇಳಿದಂತೆಲ್ಲ ಹಲವು ಕುತೂಹಲಗಳು ನಮ್ಮೊಳಗೆ ಹುಟ್ಟಿಕೊಳ್ಳುತ್ತವೆ. ಇಂತಹ ಕುತೂಹಲಗಳು ಓದುಗನಿಗೆ ಸುಲಭವಾಗಿ ಸಿಕ್ಕಷ್ಟು ಸಿನಿಮಾ ನೋಡುವ ಪ್ರೇಕ್ಷನಿಗೆ ಸಿಕ್ಕುವುದಿಲ್ಲ ಎನ್ನಿಸುತ್ತದೆ. ಏಕೆಂದರೆ ಸಿನಿಮಾ ನೋಡುವ ಪ್ರೇಕ್ಷಕ ಬಹುತೇಕ ಸಿನಿಕತನದ ಮನಸ್ಥಿತಿಯವನಾಗಿರುತ್ತಾನೆ. ಹೀಗಿರುವಾಗ ಆತ್ಮಕಥೆ, ನೈಜತೆ ಆಧಾರಿತ, ಅದರಲ್ಲೂ ಭೂಗತ ಜಗತ್ತಿನ ಕತೆಗಳನ್ನು ತೆರೆಗೆ ಅಳವಡಿಸುವಾಗ ನೋಡುಗನ ಭಾವನೆಗಳ ಜೊತೆ ನಿರ್ದೇಶಕ ವಿಹರಿಸಬೇಕಾಗುತ್ತದೆ. ಆತನ ಸಿನಿಕತನವನ್ನು ಸಮರ್ಥವಾಗಿ ವಶೀಕರಣ ಮಾಡಿಕೊಳ್ಳಬೇಕಾಗುತ್ತದೆ. ಪಾತ್ರಗಳೊಂದಿಗೆ ನೋಡುಗ ಸಂವಾದಿ ಆದಾಗ ಮಾತ್ರ ಈ ತರಹದ ಸಿನಿಮಾಗಳು ಗೆಲ್ಲುವನ್ನು ಕಾಣಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ನಿರ್ದೇಶಕ ಶೂನ್ಯ ಅಚ್ಚುಕಟ್ಟಾಗಿ ಮಾಡಲು ಪ್ರಯತ್ನಿಸಿದ್ದಾರೆ.

ರೌಡಿಸಂ ಚಿತ್ರಗಳೆಂದರೇ ಸರ್ವೇ ಸಾಮಾನ್ಯವಾಗಿ ಅಲ್ಲಿ ರಕ್ತದೋಕುಳಿ, ಮಾರಕಾಸ್ತ್ರಗಳ ಭರಾಟೆ, ಸೇಡಿನ ಭೂತ, ಕಾಮುಕತನ ಎಲ್ಲವೂ ಅಡಕವಾಗಿರುತ್ತದೆ. ಆದರೆ ಹೆಡ್ ಬುಷ್ ಚಿತ್ರದಲ್ಲಿ ಅದ್ಯಾವುದನ್ನೂ ಹೆಚ್ಚು ವೈಭವೀಕರಿಸುವ ಪ್ರಯತ್ನ ನಡೆದಿಲ್ಲ. ಭೂಗತ ಪಾತಕಿಗಳ ಎದೆಯಲ್ಲೂ ಪ್ರೇಮ ಅರಳುತ್ತದೆ. “ಇರೋರತ್ರ ಕಿತ್ಕೊಳ್ರೋ ಇಲ್ಲದೋರಿಗೆ ಕೊಡ್ರೋ, ಜಾತಿ ಗೀತಿ ಯಾವ್ದು ಇಲ್ಲ..” ಎನ್ನುತ್ತಾ ಮುಂದುವರಿಯುವ ಹಾಡಿನ ಸಾಹಿತ್ಯ ಸಮಾನತೆಯ ರೂಪಕವಾಗಿ ನಮ್ಮನ್ನು ಕಾಡುತ್ತದೆ.
ಡಾನ್ ಜಯರಾಜ್ ಸಂಪೂರ್ಣ ಬೆಂಗಳೂರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಭರದಲ್ಲಿ ಸಾಮಾಜಿಕ ಹೊಣೆಗಾರಿಕೆ, ಸಮಾನತೆ, ಮನುಜತ್ವದ ಗುಣವನ್ನು ಮರೆಯುವುದಿಲ್ಲ. ಹೆಣ್ಣನ್ನು ಕಾಮುಕತನದಿಂದ ನೋಡದೇ ನಿರ್ಮಲ ಪ್ರೇಮಿಯಾಗಿ ರಮಿಸುವ, ಅವಳ ಯಾತನೆಗೆ ಕಿವಿಯಾಗುವ ಡಾನ್ ಜಯರಾಜ್ ಕೇವಲ ರಾಕ್ಷಸ, ರಕ್ತಬಾಕನಲ್ಲ ಅವನೊಳಗಿನ ಅಗಾಧ ಅಂತಃಕರಣ ಎದ್ದು ಕಾಣುತ್ತದೆ. ಹೀಗೆ ಚಿತ್ರದಲ್ಲಿ ಚರ್ಚೆಗೆ ಒಡ್ಡಬಲ್ಲ ಸಾಕಷ್ಟು ಗಮನಾರ್ಹ ಅಂಶಗಳು ಅಲ್ಲಲ್ಲಿ ಕಾಣ ಸಿಗುತ್ತವೆ.

‘ಅರಸು’ ಎನ್ನುವ ಗಟ್ಟಿತನದ ಧೀಮಂತ ಪಾತ್ರದಲ್ಲಿ ದೇವರಾಜ್ ಅಭಿನಯಿಸಿದ್ದು, ಪಾತ್ರಕ್ಕೆ ತಕ್ಕಂತೆ ನ್ಯಾಯ ಒದಗಿಸಿದ್ದಾರೆ. ‘ರೀಶ್ಮಾ’ ಪಾತ್ರದಲ್ಲಿ ಪಾಯಲ್ ರಜಪೂತ್, ಕೊತ್ವಾಲ್ ರಾಮಚಂದ್ರ ರಾವ್ ಪಾತ್ರದಲ್ಲಿ ವಸಿಷ್ಠ ಎನ್ ಸಿಂಹ ಅವರ ನಟನೆ ಎರಡನೇ ಭಾಗಕ್ಕೂ ಮುಂದುವರಿಯುತ್ತದೆ. ಚರಣ್ ರಾಜ್ ಸಂಗೀತ ಸಂಯೋಜನೆ ಪ್ರೇಕ್ಷಕರನ್ನು ಕಿಕ್ಕೇರಿಸುತ್ತದೆ. ದಕ್ಷ ಪೊಲೀಸ್ ಅಧಿಕಾರಿಯಾಗಿ ಪ್ರಕಾಶ್ ಬೆಳವಾಡಿ, ಮುಖ್ಯಮಂತ್ರಿ ಅರಸು ಅವರ ಮಗಳಾಗಿ ಶೃತಿ ಹರಿಹರನ್, ಅಳಿಯನಾಗಿ ರಘು ಮುಖರ್ಜಿ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ.

“ಹೆಡ್ ಬುಷ್” ಅದೊಂದು ಜೂಜು ಅಂದುಕೊಂಡಿದ್ದ ಜಯರಾಜ್ ಅಂಡ್ ಗ್ಯಾಂಗ್ ಅಡ್ಡದಲ್ಲಿ ನಟ ರವಿಚಂದ್ರನ್ ಕಾಣಿಸಿಕೊಂಡು ಬದುಕಿನ ಪಾಠವನ್ನು ಬೋಧಿಸಿ ಮರೆಯಾಗುತ್ತಾರೆ. ಇನ್ನು ಗಂಗಾ ಎನ್ನುವ ಪಾತ್ರದಲ್ಲಿ ಲೂಸ್ ಮಾದ ಯೋಗಿ ನಟನೆ ಅದ್ಬುತ. ಯೋಗಿಯ ಸಿನಿ ಕೆರಿಯರ್ ನ ಆರಂಭದ ದಿನಗಳಲ್ಲಿ ನೆಗೆಟಿವ್ ಪಾತ್ರಗಳು ನೆನಪಿಗೆ ಬರುತ್ತವೆ. ಆ ಪೈಕಿ ಗಂಗಾ ಪಾತ್ರ ಸದಾ ನೆನಪಿನಲ್ಲಿ ಉಳಿಯುವಂತದ್ದಾಗುತ್ತದೆ.

ನಾಗರಿಕ ಸಮಾಜದಲ್ಲಿ ರೌಡಿಸಂ ಒಪ್ಪುವಂತಹ ವಿಷಯವೇ ಅಲ್ಲ. ಆದರೆ ಅವರ ವರ್ತೆನೆಯಿಂದ ಕಲಿಯಬೇಕಾದ ವಿಷಯಗಳು ಬಹಳಷ್ಟಿವೆ. ಸಿನಿಮಾದಲ್ಲಿ ಅನಗತ್ಯವಾದ ಒಂದೇ ಒಂದು ದೃಶ್ಯವೂ ಕಾಣಿಸುವುದಿಲ್ಲ. ಪ್ರತಿ ಪಾತ್ರಗಳಿಗೂ ನ್ಯಾಯ ಒದಗಿಸುವುದು ಅಂತಾರಲ್ಲ ಹಾಗೆ ಎಲ್ಲ ಪಾತ್ರಗಳೂ ಇಲ್ಲಿ ಪ್ರಮುಖ ಎನ್ನಿಸುತ್ತವೆ.
ಇಲ್ಲಿಯವರೆಗೆ ಬೆಂಗಳೂರಿನ ರೌಡಿಸಂ ಕತೆಗಳನ್ನು ತೆರೆಯ ಮೇಲೆ ನೋಡಿದ ಪ್ರೇಕ್ಷಕರಿಗೆ ಮತ್ತೊಂದು ಭೂಗತ ಜಗತ್ತಿನ ಹೊಸ ಅಧ್ಯಾಯ ತೆರೆ ಮೇಲೆ ಶುರುವಾಗಿದೆ

Dhananjaya KA

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745
Share via
Copy link
Powered by Social Snap