HomeNewsಕಿರಣ್ ರಾಜ್ ಅಭಿನಯದ "ಬಡ್ಡೀಸ್" ಜೂನ್ 24 ರಂದು ತೆರೆಗೆ.

ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಜೂನ್ 24 ರಂದು ತೆರೆಗೆ.

“ಕನ್ನಡತಿ” ಧಾರಾವಾಹಿಯ ಮೂಲಕ ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರ ಜೂನ್ 24 ರಂದು ಬಿಡುಗಡೆಯಾಗುತ್ತಿದೆ.

ಬಿಡುಗಡೆ ದಿನಾಂಕ ಘೋಷಣೆ ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ಕಿರಣ್ ರಾಜ್ ಅವರ ತಂದೆ, ತಾಯಿ ಹಾಗೂ ಅಭಿಮಾನಿ ಸಮರ್ಥ್ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದರು.

ಆನಂತರ ಚಿತ್ರತಂಡ ಮಾಧ್ಯಮದ ಬಳಿ “ಬಡ್ಡೀಸ್” ಬಗ್ಗೆ ಮಾತನಾಡಿದರು.

ಕಥೆ ಸಿದ್ದಮಾಡಿಕೊಂಡು, ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಸ್ನೇಹಿತರ ಮೂಲಕ ದುಬೈ ನಿವಾಸಿ ಭಾರತಿ ಶೆಟ್ಟಿ ಅವರ ಪರಿಚಯವಾಯಿತು. ಕಥೆ ಮೆಚ್ಚಿದ ಅವರು ನಿರ್ಮಾಣಕ್ಕೆ ಮುಂದಾದರು.ಇದೊಂದು ಸ್ನೇಹದ ಮಹತ್ವ ಸಾರುವ ಚಿತ್ರ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಕಥಾಹಂದರ. “ಬಡ್ಡೀಸ್” ಎಂದರೆ ಕಾಲೇಜಿನಲ್ಲಿ ಈಗಿನ ಹುಡುಗರು ಸ್ನೇಹಿತರನ್ನು ಕರೆಯುವ ಪದ. ಕಿರಣ್ ರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಎಲ್ಲಾ ತಂದೆ ಸಾಮಾನ್ಯವಾಗಿ ಮಗನಿಗೆ ಕಾರು, ಬೈಕು ಮುಂತಾದವುಗಳನ್ನು ನೀಡುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಶ್ರೀಮಂತ ತಂದೆ, ಮಗನಿಗೆ ಸ್ನೇಹಿತರನ್ನೇ ಉಡುಗೊರೆ ನೀಡುತ್ತಾನೆ. ನಾಯಕ ಹಾಗೂ ಮೂವರು ಸ್ನೇಹಿತರ ಜೊತೆ ನಡೆಯುವ ಕಥಾಹಂದರವಿದು. ಪ್ರೇಮಕಥೆಯೊಂದಿಗೆ, ಸೆಂಟಿಮೆಂಟ್ ಸನ್ನಿವೇಶಗಳು ಸಹ ನಮ್ಮ ಚಿತ್ರದಲ್ಲಿ ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ. ಜೂನ್ 24 ರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದರು ನಿರ್ದೇಶಕ ಗುರುತೇಜ್ ಶೆಟ್ಟಿ.

ನಾನು ಮೂಲತಃ ಬೆಂಗಳೂರಿನವಳು. ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿದ್ದೀನಿ. ಜಾಹೀರಾತು ಸಂಸ್ಥೆ ನಡೆಸುತ್ತಿದ್ದೇನೆ. ಚಿಕ್ಕಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹಂಬಲ. ಅಪ್ಪ, ಅಮ್ಮ ರಾಜಕುಮಾರ್ ಮುಂತಾದವರ ಚಿತ್ರಗಳನ್ನು ‌ನೋಡಿಕೊಂಡು ಬಂದು ಕಥೆ ಹೇಳುತ್ತಿದ್ದರು. ಆಗಿನಿಂದಲೂ ನನಗೆ ಸಿನಿಮಾ ಆಸಕ್ತಿ. ಗುರುತೇಜ್ ಶೆಟ್ಟಿ ಗೆಳೆಯರೊಬ್ಬರ ಮೂಲಕ ಪರಿಚಯವಾಗಿ, ಕಥೆ ಕಳುಹಿಸಿದ್ದರು. ಕಥೆ ಹಿಡಿಸಿತು. ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಾಯದಿಂದ ಚಿತ್ರ ಉತ್ತಮವಾಗಿ ಬಂದಿದೆ. ಮುಂದಿನ ತಿಂಗಳು 24 ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕಿ ಭಾರತಿ ಶೆಟ್ಟಿ.

ನಾನು ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನನಗೆ ಹೆಸರು ತಂದುಕೊಟ್ಟದ್ದು “ಕನ್ನಡತಿ”.
ಆನಂತರ ಒಳ್ಳೆಯ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿದ್ದ ನನಗೆ ಗುರುತೇಜ್ ಶೆಟ್ಟಿ ಅವರು ಹೇಳಿದ್ದ ಕಥೆ ಹಿಡಿಸಿತು. ಹಿಂದೆ “ಮಾರ್ಚ್ 22″ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನಾಯಕನಾಗಿ ಇದು ಮೊದಲ ಚಿತ್ರ. ಸ್ನೇಹದ ಮಹತ್ವ ಸಾರುವ ಈ ಚಿತ್ರದಲ್ಲಿ ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಇದೆ. ನನ್ನ ಅಭಿಮಾನಿ ಸಮರ್ಥ್ ಮತ್ತು ನನ್ನ ತಂದೆ, ತಾಯಿ ಹಾಡು ಬಿಡುಗಡೆ ಮಾಡಿದ್ದು ಸಂತಸ ತಂದಿದೆ ಎಂದರು ನಾಯಕ ಕಿರಣ್ ರಾಜ್.

ತಮ್ಮ ಅಭಿನಯದ ಬಗ್ಗೆ ನಟ ಗೋಪಾಲ್ ದೇಶಪಾಂಡೆ ಮಾಹಿತಿ ನೀಡಿದರು. ಒಂದೇ ಟೇಕ್ ನಲ್ಲಿ ಈ ಚಿತ್ರದ ಹಾಡೊಂದರ ನೃತ್ಯ ನಿರ್ದೇಶನ ಮಾಡಿರುವುದಾಗಿ ನೃತ್ಯ ನಿರ್ದೇಶ ಧನಂಜಯ್ ತಿಳಿಸಿದರು.

ಜ್ಯೂಡಿ ಸ್ಯಾಂಡಿ ” ಬಡ್ಡೀಸ್ ” ಹಾಡುಗಳಿಗೆ ಸಂಗೀತ ನೀಡಿದ್ದು, ಯು ಎಸ್ ಎ ನಿವಾಸಿ ನಿಭಾ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.

Must Read

spot_img
Share via
Copy link
Powered by Social Snap