ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ
ಅದ್ದೂರಿ ಚಾಲನೆ.
ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ನಿರ್ಮಿಸುತ್ತಿರುವ, ರಂಜಿತ್ ಕುಮಾರ್ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಮತ್ತು ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸುತ್ತಿರುವ ‘ಕಡಲ್ ಕೋಟೆ’ ಚಿತ್ರದ ಮುಹೂರ್ತ ಇತ್ತೀಚೆಗೆ, ಸುರತ್ಕಲ್‍ನ ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ನಡೆಯಿತು.

ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮಂಗಳೂರಿನ ಲೋಕಾಯುಕ್ತ ಎಸ್.ಪಿ ಯಾಗಿರುವ ಬಿ.ಪಿ. ದಿನೇಶ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ನಿವೃತ್ತ ಲೋಕಾಯುಕ್ತ ಕಮಿಷನರ್ ನಟರಾಜ್, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯ್ ಪೂಜಾರಿ ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೊಂದು ಕರಾವಳಿ ಪ್ರದೇಶದಲ್ಲಿ ನಡೆಯುವ ಗ್ಯಾಂಗ್‍ಸ್ಟರ್ ಕಥೆ ಎಂದು ವಿವರಿಸಿದ ನಿರ್ದೇಶಕ ರಂಜಿತ್ ಕುಮಾರ್ ಗೌಡ, ‘ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಸ್ನೇಹ, ಪ್ರೀತಿ ಎಲ್ಲವೂ ಇರುತ್ತದೆ. ದುಡ್ಡಿನ ಹಿಂದೆ ಮನುಷ್ಯ ಬಿದ್ದರೆ, ಅವನ ಜೀವನದಲ್ಲಿ ಏನೆಲ್ಲಾ ಘಟಿಸುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹಾರ್ಬರ್ ಮೇಲೆ ಹಿಡಿತ ಸಾಧಿಸುವ ಕಥೆ ಇದು. ಹಾರ್ಬರ್ ನಲ್ಲಿ ನಡೆಯುವ ಶೋಷಣೆ ಮತ್ತು ಸಂಘರ್ಷ, ಇದರ ನಡುವೆ ಬೆಂಕಿಯಲ್ಲಿ ಅರಳಿದ ಹೂವು ಎನ್ನುವಂತೆ ನಾಯಕ ಹೇಗೆ ಎದ್ದು ಬರುತ್ತಾನೆ ಎಂದು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಒಂದಿಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಕಥೆ ಮಾಡಿದ್ದೇವೆ. ಉಡುಪಿ, ಸುರತ್ಕಲ್, ಮಂಗಳೂರು ಹಾರ್ಬರ್, ಬೇಂಗ್ರೆ ಮುಂತಾದ ಕಡೆ ಸುಮಾರು 65 ದಿನಗಳಲ್ಲಿ ಚಿತ್ರೀಕರಣ ಮಾಡುವ ಯೋಚನೆ ಇದೆ. ಕಥೆಗೆ ಪೂರಕವಾದ ಲೊಕೇಶನ್‍ಗಳು ಸಿಕ್ಕಿವೆ. ಚಿತ್ರದಲ್ಲಿ ಐದು ಹಾಡುಗಳಿವೆ’ ಎಂದು ಹೇಳಿದರು.

ನಿರ್ಮಾಪಕ ಧರ್ಮೇಂದ್ರ ಅವರಿಗೆ ಇದು ಮೊದಲ ಚಿತ್ರ. ತಾವು ನೋಡಿದ ಮತ್ತು ಕೇಳಿದ ಒಂದಿಷ್ಟು ಘಟನೆಗಳನ್ನು, ನಿರ್ದೇಶಕ ರಂಜಿತ್ ಅವರಿಗೆ ಹೇಳಿದಾಗ ಈ ಕಥೆ ರೂಪುಗೊಂಡಿತಂತೆ. ‘ಚಿತ್ರದಲ್ಲಿ ಅದ್ಭುತ ತಾರಾಬಳಗವಿದೆ. ಅದರ ಜೊತೆಗೆ ನಮ್ಮ ತಂಡದಲ್ಲಿ ಒಂದಿಷ್ಟು ಒಳ್ಳೆಯ ಕಲಾವಿದರಿದ್ದಾರೆ. ಅವರಿಗೆಲ್ಲಾ ಒಳ್ಳೆಯದಾಗಬೇಕೆಂಬ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಇದೊಂದು ಒಳ್ಳೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ. ಮುಂದೆ ಸಹ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ’ ಎಂದರು.
ನಾಯಕ ವಸಿಷ್ಠ ಸಿಂಹ ಮಾತನಾಡಿ, ‘ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರವನ್ನೂ ಬಹಳ ಅಚ್ಚುಕಟ್ಟಾಗಿ ಬರೆದಿದ್ದಾರೆ ಮತ್ತು ಒಳ್ಳೆಯ ಬರವಣಿಗೆಯೇ ನಾನು ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ. ಈ ಸುತ್ತಮುತ್ತಲಿನ ಭಾಗದಲ್ಲಿ ನಡೆದ ಹಲವಾರು ಘಟನೆಗಳನ್ನಾಧರಿಸಿ ಈ ಕಥೆ ಮಾಡಿದ್ದಾರೆ. ಈ ಕಥೆ ವಿಭಿನ್ನವಾಗಿದೆ ಎನ್ನುವುದಕ್ಕಿಂತ ಹೆಚ್ಚು ನೈಜವಾಗಿದೆ ಮತ್ತು ಮನಸ್ಸಿಗೆ ಬಹಳ ಹತ್ತಿರವಾಗುವಂತಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಗ್ಯಾಂಗ್‍ಸ್ಟರ್ ಕಥೆಯದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ. ಬಹಳ ದಿನಗಳ ನಂತರ ನಾನು ಒಂದು ಮಾಸ್ ಪಾತ್ರವನ್ನು ಮಾಡುತ್ತಿದ್ದೇನೆ. ರವಿಶಂಕರ್ ಅವರ ಜೊತೆಗೆ ಇದು ನನ್ನ ಮೂರನೆಯ ಚಿತ್ರ. ಅವರ ಜೊತೆಗೆ ನಟಿಸುತ್ತಿರುವುದು ಬಹಳ ಖುಷಿಯ ವಿಷಯ’ ಎಂದರು.
ರವಿಶಂಕರ್ ಈ ಚಿತ್ರದಲ್ಲಿ ಸೂತ್ರಧಾರನ ಪಾತ್ರ ಮಾಡುತ್ತಿದ್ದಾರಂತೆ. ‘ರಂಜಿತ್ ಈ ಕಥೆ ಹೇಳಿದಾಗ, ನನಗೆ ಅವರ ಕ್ಲಾರಿಟಿ ಬಹಳ ಇಷ್ಟವಾಯಿತು. ಇದರಲ್ಲಿ ಬಹಳ ಮುಖ್ಯವಾದ ಪಾತ್ರವಿದೆ. ನಾನೇನು ಪಾತ್ರ ಮಾಡುತ್ತಿದ್ದೇನೆ ಎಂದು ಹೇಳಿಬಿಟ್ಟರೆ, ಕಥೆ ಬಿಟ್ಟುಕೊಟ್ಟಂತಾಗುತ್ತದೆ. ನನ್ನ ಪಾತ್ರದ ಮೂಲಕ ಇಡೀ ಕಥೆ ನಡೆಯುತ್ತದೆ. ಇದು ನನಗೆ ಇನ್ನೊಂದು ಒಳ್ಳೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
‘ಕಡಲ್ ಕೋಟೆ’ ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಗಿ ಸುಷ್ಮಿತಾ ಭಟ್ ನಟಿಸುತ್ತಿದ್ದು, ಮಿಕ್ಕಂತೆ ರವಿಶಂಕರ್, ಅಚ್ಯುತ್ ಕುಮಾರ್, ಸ್ವರಾಜ್ ಶೆಟ್ಟಿ, ಶರತ್ ಲೋಹಿತಾಶ್ವ, ತಾರಾ, ಬಲ ರಾಜವಾಡಿ, ಯಶ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ, ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣ ಮತ್ತು ಪವನ್ ಗೌಡ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪವನ್ ಕುಮಾರ್ ಉಡುಪಿ ಕಾರ್ಯ ನಿರ್ವಹಿಸುತ್ತಿದ್ದಾರೆ.

