ವೇಮಗಲ್ ಜಗನ್ನಾಥ ರಾವ್ ನಿರ್ದೇಶನದಲ್ಲಿ “ನನ್ನ ಹುಡುಕಿ ಕೊಡಿ”.
ಕನ್ನಡ ಚಿತ್ರರಂಗಕ್ಕೆ
“ತುಳಸಿದಳ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ನಿರ್ದೇಶನದ “ನನ್ನ ಹುಡುಕಿ ಕೊಡಿ” ಚಿತ್ರದ ಮುಹೂರ್ತ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನಡೆಯಿತು. ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಆರಂಭ ಫಲಕ ತೋರಿದರು. ನಿರ್ದೇಶಕ ಮಹೇಶ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.
ಕನಕಪುರದ ಧನ್ವಿತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ, ಬಂಡವಾಳವನ್ನು ಹೂಡುತ್ತಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಚಿತ್ರದ ನಾಯಕ ಹಾಗೂ ನಿರ್ಮಾಪಕ ಧನ್ವಿತ್ ಅವರ ಹುಟ್ಟುಹಬ್ಬದಂದು ಚಿತ್ರಕ್ಕೆ ಚಾಲನೆ ನೀಡಿದ್ದೀವಿ. ಇಂದು ಮುಹೂರ್ತ ಸಮಾರಂಭದೊಂದಿಗೆ ಧನ್ವಿತ್ ಅವರ ಹುಟ್ಟುಹಬ್ಬದ ಆಚರಣೆ ಹಾಗೂ ನಿರ್ಮಾಣ ಸಂಸ್ಥೆಯ ಉದ್ಘಾಟನೆ ಸಹ ನೆರವೇರಿದೆ.
ಮುಂದಿನವಾರದಿಂದ ಚಿತ್ರೀಕರಣ ಆರಂಭಿಸುತ್ತೇವೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ಮೀನಾಕ್ಷಿ ಜೈಸ್ವಾಲ್ ಹಾಗೂ ಸಾಯಿ ನಯನ ಈ ಚಿತ್ರದ ನಾಯಕಿಯರು. ಪೋಷಕಪಾತ್ರಗಳಲ್ಲಿ ಕನ್ನಡದ ಪ್ರಸಿದ್ದ ಕಲಾವಿದರು ಅಭಿನಯಿಸಲಿದ್ದಾರೆ ಎಂದು ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ನಾನು ಮೂಲತಃ ಕನಕಪುರದವನು. ಹಿಂದೆ ವೇಮಗಲ್ ಜಗನ್ನಾಥ ರಾವ್ ಅವರ ನಿರ್ದೇಶನದ “ಆವರ್ತ” ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದೆ. ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಧನ್ವಿತ್ ಫಿಲಂ ಫ್ಯಾಕ್ಟರಿ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಾನೇ ನಿರ್ಮಾಣ ಮಾಡುತ್ತಿದ್ದೇನೆ. ವಾಸುಕಿ ಭುವನ್ ಅವರು ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ನಿರ್ದೇಶಕರು ಪೂರ್ತಿ ಕಥೆ ಹೇಳಿಲ್ಲ. ಒಂದೆಳೆ ಹೇಳಿದ್ದಾರೆ. ತುಂಬಾ ಚೆನ್ನಾಗಿದೆ ಎಂದರು ನಾಯಕ ಹಾಗೂ ನಿರ್ಮಾಪಕ ಧನ್ವಿತ್.
ನಾಯಕಿಯರಾದ ಮೀನಾಕ್ಷಿ ಜೈಸ್ವಾಲ್, ಸಾಯಿ ನಯನ ಹಾಗೂ ಛಾಯಾಗ್ರಾಹಕ ಸೂರ್ಯಕಾಂತ್ “ನನ್ನ ಹುಡುಕಿ ಕೊಡಿ” ಬಗ್ಗೆ ಮಾತನಾಡಿದರು.