ಟೀಸರ್ ಮೂಲಕ ಕುತೂಹಲ ಹುಟ್ಟಿಸಿದೆ ವಿ.ಲವ ನಿರ್ದೇಶನದ ಈ ಚಿತ್ರ
ಈ ಹಿಂದೆ “ನಂಜುಂಡಿ ಕಲ್ಯಾಣ”, “ಮಡಮಕ್ಕಿ” ಚಿತ್ರಗಳಲ್ಲಿ ಅಭಿನಯಿಸಿದ್ದ ನಟ, ನಿರ್ಮಾಪಕ ತನುಷ್ ಶಿವಣ್ಣ ಈಗ “ನಟ್ವರ್ ಲಾಲ್” ಚಿತ್ರದಲ್ಲಿ ನಟಿಸಿದ್ದಾರೆ.
“ಅಯೋಧ್ಯಾಪುರ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವಿ.ಲವ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ “ನಟ್ವರ್ ಲಾಲ್” ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕುಣಿಗಲ್ ಶಾಸಕರಾದ ರಂಗನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ ಮ ಹರೀಶ್, ಮಾಸ್ತಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.
.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಲವ, “ನಟ್ವರ್ ಲಾಲ್” ಚಿತ್ರ ಕನ್ನಡ ಸೇರಿದಂತೆ ೫ ಭಾಷೆಗಳಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ಚಿತ್ರವಾಗಿದ್ದು, ನಮ್ಮ ಸುತ್ತಮುತ್ತ ನಡೆಯುವ ನೈಜಘಟನೆಗಳನ್ನಿಟ್ಟುಕೊಂಡೆ ಕಥೆ ಮಾಡಿದ್ದೀನಿ. ಉದಾಹರಣೆಗೆ ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ ಎಲ್ಲಾ ಇದೆ. ಬೆಂಗಳೂರು, ಮೈಸೂರು ಸಕಲೇಶಪುರ, ಮಂಗಳೂರು, ಸುತ್ತಮುತ್ತ ೯೫ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಮ್ಮ ಜನರನ್ನು ಹ್ಯಾಕರ್ಸ್ ಹೇಗೆಲ್ಲಾ ವಂಚಿಸುತ್ತಾರೆ, ಎಂಬುದು ಸಹ ಚಿತ್ರದಲ್ಲಿದೆ. ೨೦೧೯ರಲ್ಲೇ ಚಿತ್ರ ಪ್ರಾರಂಭವಾಗಿದ್ದರೂ ಕೋವಿಡ್ ನಿಂದಾಗಿ ತಡವಾಯಿತು ಎಂದು ಹೇಳಿದರು.
ಕ್ರಿಮಿನಲ್ ಮಿಥಿಲೇಶ್ ಕುಮಾರ್ ಶ್ರೀವಾತ್ಸವ. ಈತ ಭಾರತದ ಸಾಲವನ್ನೆಲ್ಲ ತೀರಿಸುತ್ತೇನೆಂದು ಹೇಳಿದ್ದನಂತೆ. ಈ ವಿಷಯ ಸೇರಿದಂತೆ ಅನೇಕ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದ ಕಥೆಯಲ್ಲಿ ಇರುತ್ತದೆ ಎಂದು ನಿರ್ದೇಶಕ ಲವ ಚಿತ್ರದ ಕಥೆ ಬಗ್ಗೆ ಹೇಳಿದಾಗ, ನನಗೆ ತುಂಬಾ ಇಂಪ್ರೆಸ್ ಆಯ್ತು. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಧರ್ಮವಿಶ್ ಅವರ ಸಾರಥ್ಯದಲ್ಲಿ ರೀರೆಕಾರ್ಡಿಂಗ್ ಅದ್ಭುತವಾಗಿ ಬಂದಿದೆ. ಛಾಯಾಗ್ರಾಹಕ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಸುಂದರವಾಗಿದೆ. ನಿರ್ದೇಶಕ ಲವ ಅವರಂತು ಬ್ಯೂಟಿಫುಲ್ ಫಿಲಂ ಮೇಕರ್. ತಾನು ಅಂದುಕೊಂಡದ್ದು ಸಿಗುವವರೆಗೂ ಬಿಡುವವರಲ್ಲ ಎಂದು ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಹೇಳಿದರು.
ಇದೊಂದು ಉತ್ತಮ ಕಥೆಯುಳ್ಳ ಚಿತ್ರ. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು ಛಾಯಾಗ್ರಾಹಕ ವಿಲಿಯಂ ಡೇವಿಡ್.
ಸಂಗೀತ ನಿರ್ದೇಶಕ ಧರ್ಮ ವಿಶ್ ಮಾತನಾಡಿ, ಚಿತ್ರದಲ್ಲಿ ೨ ಹಾಡುಗಳಿವೆ. ಎರಡು ಹಾಡುಗಳು ಅದ್ಭುತವಾಗಿದೆ ಎಂದರು.
ಮೊದಲಬಾರಿಗೆ ಸೋಷಿಯಲ್ ವರ್ಕರ್ ಪಾತ್ರ ಮಾಡಿದ್ದೇನೆ. ಇಲ್ಲಿ ನನ್ನ ಪಾತ್ರದ ಹೆಸರು ನಂದಿನಿ. ತನುಷ್ ಸಿನಿಮಾ ಬಿಟ್ಟು ಬೇರೇನೂ ಯೋಚಿಸುವವರಲ್ಲ. ಅವರಿಗೆ ಶುಭವಾಗಲಿ. ಇದು ನನ್ನ ಎರಡನೇ ಪ್ಯಾನ್ ಇಂಡಿಯಾ ಚಿತ್ರ ಎಂದರು ನಾಯಕಿ ಸೋನಾಲ್ ಮೊಂತೆರೊ.
ತನುಷ್ ಒಬ್ಬ ಅತ್ಯುತ್ತಮ ಸ್ನೇಹಿತ. ಈ ಸಲ ಯಶಸ್ಸು ಕಾಣಲೇಬೇಕೆಂದು ನಿರ್ಧರಿಸಿ ತುಂಬಾ ಪ್ರಯತ್ನ ಹಾಕಿದ್ದಾರೆ. ಇದು ಎಲ್ಲಾ ವರ್ಗದವರೂ ಇಷ್ಟಪಡುವಂಥ ಚಿತ್ರ ಎಂದು ನಟ ರಾಜೇಂದ್ರ ಕಾರಂತ್ ಹೇಳಿದರು. ಉಳಿದಂತೆ ಹರಿಣಿ, ವಿಜಯ್ ಚೆಂಡೂರ್, ಕಾಕ್ರೋಚ್ ಸುಧಿ, ಕಾಂತರಾಜ್ ಕಡ್ಡಿಪುಡಿ ಚಿತ್ರದ ಬಗ್ಗೆ ಮಾತನಾಡಿದರು. ಅಲ್ಲದೆ ಯಶ್ ಶೆಟ್ಟಿ, ರಾಜೇಶ್ ನಟರಂಗ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.