HomeNewsವಸಿಷ್ಠ ಸಿಂಹ ಅಭಿನಯದ "Love ಲಿ" ಚಿತ್ರಕ್ಕೆ 25 ದಿನಗಳ ಸಂಭ್ರಮ .

ವಸಿಷ್ಠ ಸಿಂಹ ಅಭಿನಯದ “Love ಲಿ” ಚಿತ್ರಕ್ಕೆ 25 ದಿನಗಳ ಸಂಭ್ರಮ .

ಅಭುವನಸ ಕ್ರಿಯೇಷನ್ಸ್ ಲಾಂಛನದಲ್ಲಿ ರವೀಂದ್ರ ಕುಮಾರ್ ಅವರು ನಿರ್ಮಿಸಿರುವ, ಚೇತನ್ ಕೇಶವ್ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯ ಹಾಗೂ ಕಂಠದಿಂದ ಜನಮನಸೂರೆಗೊಂಡಿರುವ ವಸಿಷ್ಠ ಸಿಂಹ ನಾಯಕರಾಗಿ ನಟಿಸಿರುವ “Love ಲಿ” ಚಿತ್ರ ಬಿಡುಗಡೆಯಾಗಿ 25 ದಿನಗಳಾಗಿದೆ. ಪ್ರಸ್ತುತ ಕರ್ನಾಟಕದ ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ‌. ಈ ಸಂದರ್ಭದಲ್ಲಿ ಸಮಾರಂಭ ಆಯೋಜಿಸಿದ್ದ ನಿರ್ಮಾಪಕರು ಚಿತ್ರತಂಡದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ ಚಿತ್ರವನ್ನು ಮೊದಲಿನಿಂದಲೂ ಪ್ರೋತ್ಸಾಹಿಸುತ್ತಾ ಬಂದಿರುವ ಮಾಧ್ಯಮದವರಿಗೆ ಹಾಗೂ ಚಿತ್ರ ನೋಡಿ ಹಾರೈಸುತ್ತಿರುವ ಪ್ರೇಕ್ಷಕರಿಗೆ ಧನ್ಯವಾದ ಎಂದು ಮಾತನಾಡಿದ ನಾಯಕ ವಸಿಷ್ಠ ಸಿಂಹ, ಜೂನ್ ತಿಂಗಳು ನಮಗೆ ಮಾರಕವಾಯಿತು ಎಂದರೆ ತಪ್ಪಾಗಲಾರದು. ನಮ್ಮ ಚಿತ್ರ ಬಿಡುಗಡೆ ಸಮಯದಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಾಯಿತು. ಆ ಸಮಸ್ಯೆಗಳ ನಡುವೆ ನಮ್ಮ ಚಿತ್ರ ತೆರೆ ಕಂಡಿತ್ತು. ಚೇತನ್ ಕೇಶವ ಅವರ ಮೊದಲ ನಿರ್ದೇಶನದಲ್ಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಚಿತ್ರ ನೋಡಿದವರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ‌. ಇಷ್ಟೆಲ್ಲದರ ನಡುವೆ ನಾವು ನಿರೀಕ್ಷಿಸಿದಷ್ಟು ಜನ ಬರುತ್ತಿಲ್ಲ ಎಂಬ ಬೇಸರ ಚಿತ್ರತಂಡಕ್ಕಿದೆ‌. ದಯವಿಟ್ಟು ಕನ್ನಡ ಚಿತ್ರಗಳನ್ನು ಹೆಚ್ಚು ಪ್ರೋತ್ಸಾಹಿಸಿ. ಈಗಾಗಲೇ ಚಿತ್ರ ನೋಡಿರುವವರಿಗೆ ಧನ್ಯವಾದ. ನೋಡದೇ ಇರುವವರು ಈಗಲೇ ನೋಡಿ ಎಂದರು‌‌.

ಮೊದಲು ನಮ್ಮ ಚಿತ್ರ ಇಪ್ಪತ್ತೈದು ದಿನ ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ನಮ್ಮ ಚಿತ್ರ ನೋಡಿದವರಿಗೆ ತುಂಬಾ ಇಷ್ಟವಾಗಿದೆ‌. ಆದರೆ ಇಲ್ಲಿನ ಜನ ಬೇರೆ ಭಾಷೆಗಳ ಚಿತ್ರಗಳಿಗೆ ನೀಡುವ ಪ್ರೋತ್ಸಾಹವನ್ನು ನಮ್ಮ ಕನ್ನಡ ಚಿತ್ರಗಳಿಗೆ ನೀಡುವುದಿಲ್ಲ ಎಂಬ ಬೇಸರ ಬಹಳ ಇದೆ. ದಯಮಾಡಿ ಕರ್ನಾಟಕದ ಜನರು ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ಒಬ್ಬ ನಿರ್ಮಾಪಕ ಗೆದ್ದರೆ, ಅದರಿಂದ ಬಂದ ಹಣವನ್ನು ಮತ್ತೊಂದು ಚಿತ್ರಕ್ಕೆ ಹಾಕುತ್ತಾನೆ. ಅದರಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ತಿಳಿಸಿದರು.

“ಮಫ್ತಿ” ಚಿತ್ರದ ನಿರ್ದೇಶಕ ನರ್ತನ್, ಪ್ರಶಾಂತ್ ನೀಲ್ ಅಂತಹವರ ಬಳಿ ಕೆಲಸ ಮಾಡಿ ಬಂದಿರುವ ನನಗೆ ಇದು ಮೊದಲ ನಿರ್ದೇಶನ ಚಿತ್ರ. ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರ ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ‌. ಜನ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡುತ್ತಿರುವುದಕ್ಕೆ ಖುಷಿಯಿದೆ‌. ಆದರೆ ಎಲ್ಲರೂ ಹೇಳಿದಂತೆ ನಿರೀಕ್ಷಿಸಿದಷ್ಟು ಜನರು ಚಿತ್ರ ನೋಡಿಲ್ಲ ಎಂಬ ಬೇಸರ ನನಗೂ ಇದೆ. ನಮ್ಮ ಚಿತ್ರವನ್ನು ಹೆಚ್ಚಿನ ಜನರು ನೋಡಿ ಎಂದರು ನಿರ್ದೇಶಕ ಚೇತನ್ ಕೇಶವ್.

ನಾಯಕಿ ಸ್ಟೆಫಿ ಪಟೇಲ್ ಕನ್ನಡದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ದತ್ತಣ್ಣ, ಕಾಕ್ರೋಜ್ ಸುಧೀ, ಶೇಖರ್, ವರ್ಧನ್, ಬೇಬಿ ವಂಶಿಕ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಹಾಡು ಬರೆದಿರುವ ಪ್ರಮೋದ್ ಮರವಂತೆ, ಛಾಯಾಗ್ರಾಹಕ ಅಶ್ವಿನ ಕೆನ್ನೆಡಿ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ, ಸೌಂಡ್ ಡಿಸೈನರ್ ಅಭಿನಂದನ್ ಸೇರಿದಂತೆ ಅನೇಕರು ಚಿತ್ರದ ಕುರಿತು ಮಾತನಾಡಿದರು. ನಿರ್ದೇಶಕ ಮಹೇಶ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap