ಚಿಕ್ಕ ವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು ನಮ್ಮನೆಲ್ಲಾ ಬಿಟ್ಟು ಹೋದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ “ತಲೆದಂಡ” ಚಿತ್ರ ಏಪ್ರಿಲ್ ಒಂದರಂದು ತೆರೆ ಕಾಣುತ್ತಿದೆ.
ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ನನಗೆ ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು.
ದ್ವಾರಕೀಶ್ ಸೇರಿದಂತೆ ಕೆಲವು ದಿಗ್ಗಜರ ಜೊತೆ ಕೆಲಸ ಮಾಡಿದ್ದೇನೆ. ಮೈಸೂರು ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕನಾಗೂ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನೇ ಒಂದು ಚಿತ್ರ ನಿರ್ದೇಶಿಸಬೇಕೆಂದು ಮೊದಲಿಂದ ಆಸೆ. ಈಗ ನಿರ್ಮಾಪಕರನ್ನು ಹುಡುಕಿಕೊಂಡು ಹೋಗುವ ವಯಸ್ಸಲ್ಲ ನಂದು. ನನ್ನಾಸೆಯನ್ನರಿತ ನನ್ನ ಹೆಂಡತಿ ಹೇಮಮಾಲಿನಿ, ಚಿತ್ರ ನಿರ್ಮಾಣಕ್ಕೆ ಮುಂದಾದರು. ಆ ನಂತರ ಗೆಳೆಯ ಅರುಣ್ ಕುಮಾರ್ ಸಾಥ್ ನೀಡಿದ್ದ. ಕೊರೋನ ಕಷ್ಟಗಳ ನಡುವೆ ನಮ್ಮ ಚಿತ್ರ ಮುಗಿಯಿತು. ಅರೆ ಬುದ್ದಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಹುಬ್ಬಲ್ಲಿನ ಹುಡುಗನಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಸಾಯುವ ಮುನ್ನ ನಮ್ಮ ಚಿತ್ರದ ಡಬ್ಬಿಂಗ್ ಸಹ ವಿಜಯ್ ಮುಗಿಸಿದ್ದರು. ಈಗಲೂ ಅವರನ್ನು ನೆನೆದರೆ ನನ್ನ ಬಾಯಲ್ಲಿ ಮಾತು ಬರಲ್ಲ. ನಾಯಕಿಯಾಗಿ ಸಾಕಿ ಪಾತ್ರದಲ್ಲಿ ಚೈತ್ರಾ ಆಚಾರ್, ವಿಜಯ್ ತಾಯಿಯಾಗಿ ಮಂಗಳ(ರಂಗಾಯಣ ರಘು ಮಡದಿ),
ತಂದೆಯ ಪಾತ್ರದಲ್ಲಿ ರಮೇಶ್ ಪಂಡಿತ್, ಎಂ.ಎಲ್.ಎ ಆಗಿ ಮಂಡ್ಯ ರಮೇಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಿ.ಸುರೇಶ್ ಇದ್ದಾರೆ. ನಾವು ಈಗಿನ ಅಧುನಿಕತೆಗಾಗಿ ಯಾವ ರೀತಿ ಪ್ರಕೃತಿ ಹಾಳು ಮಾಡುತ್ತಿದ್ದೇವೆ ಎಂಬದೇ ಕಥಾಹಂದರ. ಈವರೆಗೂ ಐದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ. ಭಾಷೆ ಬರದವರು ವಿಜಯ್ ಅಭಿನಯ ಕಂಡು ಬೆರಗಾಗುತ್ತಿದ್ದಾರೆ. ಹಲವು ದೊಡ್ಡ ದೊಡ್ಡ ಚಿತ್ರಗಳ ನಡುವೆ ಏಪ್ರಿಲ್ ಒಂದರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಹರಸಿ ಎಂದರು ನಿರ್ದೇಶಕ ಪ್ರವೀಣ್ ಕೃಪಾಕರ್.
ನಾಯಕಿ ಚೈತ್ರಾ ಆಚಾರ್, ಮಂಗಳ, ರಮೇಶ್ ಪಂಡಿತ್, ಮಂಡ್ಯ ರಮೇಶ್ ತಮ್ಮ ಪಾತ್ರದ ಬಗ್ಗೆ ಹೇಳುತ್ತಾ, ವಿಜಯ್ ನೆನೆದು ಭಾವುಕರಾದರು.
ನಿರ್ಮಾಪಕಿ ಹೇಮಮಾಲಿನಿ ಕೃಪಾಕರ್, ಸಂಗೀತ ನಿರ್ದೇಶಕ ಹರಿಕಾವ್ಯ ಹಾಗೂ ಸಂಕಲನಕಾರ ಬಿ.ಎಸ್.ಕೆಂಪರಾಜ್ “ತಲೆದಂಡ” ದ ಬಗ್ಗೆ ಮಾತನಾಡಿದರು. ಅಶೋಕ್ ಕಶ್ಯಪ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.