HomeNewsಸುಮಧುರವಾಗಿದೆ "ಕೌಟಿಲ್ಯ" ನ ಹಾಡುಗಳು.

ಸುಮಧುರವಾಗಿದೆ “ಕೌಟಿಲ್ಯ” ನ ಹಾಡುಗಳು.

ಸುಪ್ರಸಿದ್ಧ “ಶನಿ” ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಗಮನ ಸೆಳೆದಿದ್ದ, “ಜಂಟಲ್ ಮ್ಯಾನ್” ಚಿತ್ರದಲ್ಲಿ ಖಳನಾಯಕನಾಗಿ ಮನೆಮಾತಾಗಿರುವ ಅರ್ಜುನ್ ರಮೇಶ್ ಹಾಗೂ “ಮನಸಾರೆ” ಧಾರಾವಾಹಿ ಖ್ಯಾತಿಯ ಪ್ರಿಯಾಂಕ ಚಿಂಚೋಳಿ ನಾಯಕ- ನಾಯಕಿಯಾಗಿ ನಟಿಸಿರುವ “ಕೌಟಿಲ್ಯ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, “ಮುಂಗಾರು ಮಳೆ” ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ, ಭಾ.ಮ.ಹರೀಶ್ ಹಾಗೂ “ಪ್ರೇಮಪೂಜ್ಯಂ” ಚಿತ್ರದ ಬೃಂದಾ ಆಚಾರ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಪ್ರಭಾಕರ್ ಶೇರ್ ಖಾನೆ ಈ ಚಿತ್ರ ನಿರ್ದೇಶನ ಮಾಡಿದ್ದು, ವಿಜೇಂದ್ರ.ಬಿ.ಎ ನಿರ್ಮಾಣ ಮಾಡಿದ್ದಾರೆ.

ನಾನು ಮೊದಲು ದುನಿಯಾ ಸೂರಿ ಅವರ ಜೊತೆ ಕೆಲಸ ಮಾಡಿದ್ದೆ. ಇದು ಮೊದಲ ನಿರ್ದೇಶನದ ಚಿತ್ರ. ತುಂಬಾ ಇಷ್ಟಪಟ್ಟು, ಕಷ್ಟ ಪಟ್ಟು ಸಿನಿಮಾ ಮಾಡಿದ್ದೀವಿ. ಮೊದಲು ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಚಿತ್ರದ ನಾಯಕ ಅರ್ಜುನ್ ರಮೇಶ್ ಎಲ್ಲಾ ಕೆಲಸದಲ್ಲೂ ನನ್ನ ನೆರವಿಗೆ ನಿಂತರು.
“ಕೌಟಿಲ್ಯ” ಅಂದರೆ ಅರ್ಥಶಾಸ್ತ್ರದ ಪಿತಾಮಹ. ಒಬ್ಬ ಚಂದು ಎಂಬ ಹುಡುಗನನ್ನು ಚಂದ್ರಗುಪ್ತ ಮೌರ್ಯನನ್ನಾಗಿ ಮಾಡಿದ್ದಾತ. ನಮ್ಮ ಚಿತ್ರದ ಕಥೆಯು ಇದೇ ದಿಕ್ಕಿನಲ್ಲಿ ಸಾಗುವುದರಿಂದ “ಕೌಟಿಲ್ಯ” ಎಂದು ಹೆಸರಿಡಲಾಗಿದೆ ಎಂದರು ನಿರ್ದೇಶಕ ಪ್ರಭಾಕರ್ ಶೇರ್ ಖಾನೆ.

ನನ್ನ ಜೀವನದಲ್ಲಿ “ಶನಿ” ಹಾಗೂ “ಮಹಾಕಾಳಿ” ಧಾರಾವಾಹಿಗಳನ್ನು ಎಂದು ಮರೆಯಲು ಸಾಧ್ಯವಿಲ್ಲ. ಆ ಧಾರಾವಾಹಿಯ ಜನಪ್ರಿಯತೆಯಿಂದ ನಾನು ಪುರಸಭಾ ಸದಸ್ಯ ಕೂಡ ಆದೆ. ಚಿತ್ರದ ನಿರ್ದೇಶಕರು ಬಂದು ಕಥೆ ಹೇಳಿದಾಗ ನಾನು ಒಂದು ಮಾತು ಹೇಳಿದ್ದೆ. ನೀವು ಅಂದುಕೊಂಡ ಹಾಗೆ ಸಿನಿಮಾ ಮಾಡಿದರೆ, ಈ ಚಿತ್ರ ಒಂದು ಒಳ್ಳೆಯ ಸಿನಿಮಾ ಆಗುವುದರಲ್ಲಿ ಸಂದೇಹವಿಲ್ಲ ಎಂದು. ನಾನು ಈ ಚಿತ್ರದಲ್ಲಿ ಆರ್ಕಿಟೆಕ್ ಎಂಜಿನಿಯರ್ ಪಾತ್ರ ಮಾಡಿದ್ದೀನಿ ಎಂದರು ನಾಯಕ ಅರ್ಜುನ್ ರಮೇಶ್.

ನಾನು ಈವರೆಗೂ ಅಭಿನಯಿಸಿದ್ದ ಎಲ್ಲಾ ಪಾತ್ರಗಳು ಸೌಮ್ಯ ಸ್ವಭಾವದ ಹುಡುಗಿಯದಾಗಿರುತ್ತಿತ್ತು. ಮೊದಲ ಬಾರಿಗೆ ಸ್ವಲ್ಪ ಘಾಟಿ ಹುಡುಗಿ ಪಾತ್ರ ಮಾಡಿದ್ದೇನೆ ಎಂದರು ನಾಯಕಿ ಪ್ರಿಯಾಂಕ ಚಿಂಚೋಳಿ.

ನಾನು ಮೂಲತಃ ಸೇಲ್ಸ್ ರೆಪ್ರೆಸೆಂಟೇಟಿವ್. ಸಿನಿಮಾ ನಿರ್ಮಾಣ ನನ್ನ ಕನಸು. ಅಂದುಕೊಂಡದಕ್ಕಿಂತ ಸ್ವಲ್ಪ ಜಾಸ್ತಿ ಬಜೆಟ್ ನಲ್ಲಿ ಸಿನಿಮಾ ಸಿದ್ದವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಹನುಮಂತನ ಭಕ್ತ ಮುಂದೊಂದು ದಿನ ಹನುಮ ಚರಿತೆ ಸಿನಿಮಾ ಮಾಡುವ ಆಸೆಯಿದೆ ಎಂದರು ನಿರ್ಮಾಪಕ ವಿಜೇಂದ್ರ.

ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಸಂಗೀತ ನಿರ್ದೇಶಕ ಕಿರಣ್ ಕೃಷ್ಣಮೂರ್ತಿ ಮಾಹಿತಿ ನೀಡಿದರು. ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಮಾತನಾಡಿದರು.

Must Read

spot_img
Share via
Copy link
Powered by Social Snap