ಜೀವನದ ಸುತ್ತಾಟದ ಸುತ್ತ “ರಂಗಿನ ರಾಟೆ”
ಎಲ್ಲರ ಜೀವನ ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು ” ರಂಗಿನ ರಾಟೆ” ಚಿತ್ರ ಸಿದ್ದವಾಗುತ್ತಿದೆ. ಸದ್ಯ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಈ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು.
ನಾನು ಮುರಳಿ ಮೋಹನ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟಿದ್ದೀನಿ. ಚಿತ್ರೀಕರಣ ಮುಕ್ತಾಯವಾಗಿದೆ. ಆಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಹಾಗೂ ಸಂತೋಷ್ ನಾಲ್ಕು ಜನರ ಸುತ್ತ ಕಥೆ ಸಾಗುತ್ತದೆ. ಸಂತೋಷ್ ಮಳವಳ್ಳಿ ಅವರ ಮೂಲಕ ನಿರ್ಮಾಪಕಿ ಕವಿತಾ ಅರುಣ್ ಕುಮಾರ್ ಅವರ ಪರಿಚಯವಾಯಿತು. ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ ಎಂದು ನಿರ್ದೇಶಕ ಆರ್ಮುಗಂ ಮಾಹಿತಿ ನೀಡಿದರು.
“ಯವರಾಜ” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಗಿದೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ದೇಶಕರು ಕಥೆ ಹೇಳಿದ ಕೂಡಲೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ. ಅನಿರೀಕ್ಷಿತ ಘಟನೆಯಲ್ಲಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದರಿಂದ ಹೇಗೆ ಪಾರಾಗುತ್ತೇನೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು ಎಂದರು ರಾಜೀವ್ ರಾಥೋಡ್.
ನನಗೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಸಂತೋಷ್ ಅವರು ನಿರ್ದೇಶಕರ ಪರಿಚಯ ಮಾಡಿಸಿದರು. ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದೆ. ಮೊದಲ ಪ್ರಯತ್ನ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್.
ಇದು ನನ್ನ ಮೊದಲ ಚಿತ್ರ. ಮೊದಲ ಪತ್ರಿಕಾಗೋಷ್ಠಿ. ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಈಡೇರಿದೆ. ಕಥೆಯೇ ಈ ಚಿತ್ರದ ನಾಯಕ, ನಾಯಕಿ. ರಾಜೀವ್ ರಾಥೋಡ್, ದುನಿಯಾ ರಶ್ಮಿ ಹಾಗೂ ನಾನು ಮುಖ್ಯಪಾತ್ರದಲ್ಲಿ ನಟಿಸಿದ್ದೇವೆ. ನಮ್ಮ ಚೊಚ್ಚಲ ಪ್ರಯತ್ನಕ್ಕೆ ನಿಮ್ಮ ಹಾರೈಕೆಯಿರಲಿ ಎಂದರು ನಟಿ ಭವ್ಯ.
ಹಾಡು ಬರೆದು ನಟನೆ ಮಾಡರುವ ಸಂತೋಷ್ ಮಳವಳ್ಳಿ, ಸಂಗೀತ ನಿರ್ದೇಶಕ ಚಂದ್ರು ಒಬ್ಬಯ್ಯ, ಛಾಯಾಗ್ರಾಹಕ ರವಿ ಸುವರ್ಣ ಹಾಗೂ ಸಂಕಲನಕಾರ ದಾಮೋದರ ನಾಯ್ಡು “ರಂಗಿನ ರಾಟೆ” ಯ ಬಗ್ಗೆ ಮಾತನಾಡಿದರು.