ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಕಲಾ ನಿರ್ದೇಶಕ ಶ್ರೀನಿವಾಸ್ ಪೊಲೀಸ್ ಕಂಟ್ರೋಲ್ ರೂಂ ನ ಸೆಟ್ ನಿರ್ಮಾಣ ಮಾಡಿದ್ದಾರೆ.
ಪ್ರಜ್ವಲ್ ದೇವರಾಜ್, ದೇವರಾಜ್ ಹಾಗೂ ಸಾಧುಕೋಕಿಲ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ನಾನು ನನ್ನ ಮಗ ಇಬ್ಬರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅದಕ್ಕೂ ಖುಷಿಯ ವಿಚಾರವೆಂದರೆ ನಾನು, ಪ್ರಜ್ವಲ್ ಇಬ್ಬರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಿರ್ದೇಶಕ ಲೋಹಿತ್ ಇನ್ನು ಚಿಕ್ಕ ಹುಡುಗ. ಕೆಲಸ ಮಾಡುವ ರೀತಿ ಅದ್ಭುತ. ಸಾಧುಕೋಕಿಲ ಅವರು ಸ್ಪೆಷಲ್ ಪೊಲೀಸ್ ಆಫಿಸರ್ ಆಗಿ ಅಭಿನಯಿಸುತ್ತಿದ್ದಾರೆ ಎಂದರು ನಟ ದೇವರಾಜ್.
ನಾನು ಮೊದಲ ದಿನದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇಲ್ಲಿನ ತಂಡ ನೋಡಿದರೆ ಯಾರು ಹೊಸಬರು ಅನಿಸುವುದಿಲ್ಲ. ಎಲ್ಲರು ನುರಿತ ತಂತ್ರಜ್ಞರಂತೆ ಕಾಣುತ್ತಿದ್ದಾರೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಜೊತೆಗೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಪ್ರಜ್ವಲ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಒಂದು ಚಿತ್ರ ನಿರ್ದೇಶನವನ್ನು ಮಾಡಿದ್ದೇನೆ ಎಂದ ಸಾಧುಕೋಕಿಲ ಅವರು ನಿರ್ದೇಶಕ ಲೋಹಿತ್ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ನಾನು ಕಂಟ್ರೋಲ್ ರೂಂ ನ ಈ ಸೆಟ್ ಮೊಬೈಲ್ ನಲ್ಲಿ ನೋಡಿದ್ದೆ. ಎದುರಿಗೆ ನೋಡಿ ಹೆಚ್ಚು ಖುಷಿಯಾಯಿತು. ಅದಕ್ಕಿಂತ ಖುಷಿ ಅಂದರೆ ನನ್ನ ಅಪ್ಪನ ಜೊತೆ ಕೆಲಸ ಮಾಡುತ್ತಿರುವುದು. ಈ ಹಿಂದೆ “ಅರ್ಜುನ” ಚಿತ್ರದಲ್ಲಿ ಇಬ್ಬರು ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದೆವು. ಆದರೆ ಇದರಲ್ಲಿ ಇಬ್ಬರು ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅವರು ಸೀನಿಯರ್ ಆಫೀಸರ್. ನಾನು ಜ್ಯೂನಿಯರ್ . ಸಾಧುಕೋಕಿಲ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ. ಇದೇ ಸೆಟ್ ನಲ್ಲಿ ಹನ್ನೊಂದು ದಿನಗಳ ಚಿತ್ರೀಕರಣ ನಡೆಯಲಿದೆ. ನಿರ್ದೇಶಕ ಲೋಹಿತ್ ಅವರ ಕಾರ್ಯವೈಖರಿ ಉತ್ತಮವಾಗಿದೆ ಎಂದರು ಪ್ರಜ್ವಲ್ ದೇವರಾಜ್.
ನನ್ನಂತಹ ಕಿರಿಯ ನಿರ್ದೇಶಕ ಹಿರಿಯ ನಟರಾದ ದೇವರಾಜ್, ಸಾಧುಕೋಕಿಲ ಹಾಗೂ ನಾಯಕ ಪ್ರಜ್ವಲ್ ದೇವರಾಜ್ ಅವರೊಡನೆ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ. ಅದರಲ್ಲೂ ಪ್ರಜ್ವಲ್ ಅವರು ನೀಡುತ್ತಿರುವ ಸಹಕಾರಕ್ಕೆ ನಾನು ಆಭಾರಿ ಎನ್ನುತ್ತಾರೆ ನಿರ್ದೇಶಕ ಲೋಹಿತ್.
ಇಡೀ ಚಿತ್ರತಂಡಕ್ಕೆ ಹಾಗೂ ನೆರೆದಿದ್ದ ಮಾಧ್ಯಮದವರಿಗೆ ನಿರ್ಮಾಪಕ ಕುಮಾರ್ ಧನ್ಯವಾದ ತಿಳಿಸಿದರು.