ಪ್ರಪಂಚದಲ್ಲಿ ಅಮ್ಮನ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಅಂತಹ ಅಮ್ಮ ಜೊತೆಗಿದ್ದರೆ ಧೈರ್ಯವೂ ಕೂಡ. ಅದ್ಭುತ ವ್ಯಕ್ತಿತ್ವದ ಅಮ್ಮನ ಬಗ್ಗೆ “ಅಮ್ಮ ಎಂಬ ಹೆಸರೆ ಆತ್ಮ ಬಲ” ಎಂಬ ಹಾಡನ್ನು ಪ್ರೇಮಕವಿ ಕೆ.ಕಲ್ಯಾಣ್ ಬರೆದಿದ್ದಾರೆ “ಪರಿಮಳ ಡಿಸೋಜಾ” ಚಿತ್ರಕ್ಕಾಗಿ. ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಈ ಗೀತೆಯನ್ನು ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಕೆ.ಕಲ್ಯಾಣ್, ನಟಿ ಭವ್ಯ, ಜಂಕಾರ್ ಮ್ಯೂಸಿಕ್ ಭರತ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನಮ್ಮ ಚಿತ್ರಕ್ಕಾಗಿ ಕೆ.ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ “ಪರಿಮಳ ಡಿಸೋಜಾ” ತೆರೆಗೆ ಬರಲು ಸಿದ್ದವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಡಾ||ಗಿರಿಧರ್ ಹೆಚ್ ಟಿ.
ತಾಯಿ ಬಗ್ಗೆ ಹಾಡು ಬರೆಯಬೇಕೆಂದರೆ ಏನೋ ಒಂಥರ ಖುಷಿ. ಈ ಹಾಡನ್ನು ಶೀಘ್ರವಾಗಿ ಬರೆಯಬೇಕಿತ್ತು. ಆಗ ನಿರ್ಮಾಪಕರು ನನ್ನ ಅತ್ತಿಗೆಯ ಮೂಲಕ ಬೇಗ ಬರೆದುಕೊಡಲು ಹೇಳಿಸಿದರು. ಆಗ ನನಗೆ ತಿಳಿಯಿತು ನಿರ್ಮಾಪಕರು ನಮಗೆ ಬಳಗ ಎಂದು. ಅಮ್ಮನ ಹಾಡನ್ನು ಪ್ರೇಮ್ ಅವರು ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ ಎಂದು ಪ್ರೇಮಕವಿ ಕಲ್ಯಾಣ್ ತಿಳಿಸಿದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಹಾಡು ತುಂಬಾ ಚೆನ್ನಾಗಿದೆ. ಒಳ್ಳೆಯದಾಗಲಿ ಎಂದರು ಹಿರಿಯ ನಟಿ ಭವ್ಯ.
“ಪರಿಮಳ ಡಿಸೋಜಾ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇಂದು ಅಮ್ಮನ ಹಾಡು ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹಾಡು ಬರೆದ ಕಲ್ಯಾಣ್ ಅವರಿಗೆ, ಸುಮಧುರವಾಗಿ ಹಾಡಿದ್ದ ಪ್ರೇಮ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ಮಾಪಕ ವಿನೋದ್ ಶೇಷಾದ್ರಿ, ತಾವು ಈ ಚಿತ್ರದಲ್ಲಿ ನಟಿಸಿರುವುದಾಗಿ ಹೇಳಿದರು.
ಸಂಗೀತ ನಿರ್ದೇಶಕ ಕ್ರಿಸ್ಟೋಫರ್ ಜೋಸನ್, ಛಾಯಾಗ್ರಾಹಕ ರಾಮು ಹಾಗೂ ಚಿತ್ರದಲ್ಲಿ ನಟಿಸಿರುವ ಕೋಮಲ ಬನವಾಸಿ ಸೇರಿದಂತೆ ಅನೇಕ ಕಲಾವಿದರು “ಪರಿಮಳ ಡಿಸೋಜಾ” ಚಿತ್ರದ ಬಗ್ಗೆ ಮಾತನಾಡಿದರು.
ತಾಯಿಯ ಬಗ್ಗೆಗಿನ ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ ವಿಶೇಷವಾಗಿ ಮೂರು ಜನ ತಾಯಂದಿರನ್ನು ಸನ್ಮಾನಿಸಲಾಯಿತು.