ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸಿ ಭಟ್ಟರ ಬಳಗದವರೇ ಆದ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ‘ಪದವಿಪೂರ್ವ’ ಚಿತ್ರತಂಡದಿಂದ ಎರಡೆರಡು ಖುಷಿ ಸುದ್ದಿಗಳು ಒಮ್ಮೆಲೇ ಹೊರಬಿದ್ದಿವೆ.
ಮೊದಲನೇ ಖುಷಿ ಸುದ್ದಿ ‘ಪದವಿಪೂರ್ವ’ ಚಿತ್ರದ ಆಡಿಯೋ ರೈಟ್ಸನ್ನು ಲಹರಿ ಮ್ಯೂಸಿಕ್ ಸಂಸ್ಥೆ ಭರ್ಜರಿ ಮೊತ್ತ ನೀಡಿ ಖರೀದಿ ಮಾಡಿದೆ ಎಂಬುದು. ಹೌದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆಗೆ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗಲೇ ಚಿತ್ರದ ಹಾಡುಗಳ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮನೆ ಮಾಡಿತ್ತು. ಈಗ ನಿರೀಕ್ಷೆಗೆ ತಕ್ಕಂತ ಪದವಿಪೂರ್ವ ಚಿತ್ರದ ಹಾಡುಗಳ ಹಕ್ಕನ್ನು ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ‘ಲಹರಿ ಮ್ಯೂಸಿಕ್’ ತನ್ನ ತಕ್ಕೆಗೆ ಹಾಕಿಕೊಂಡಿದೆ.
ಇನ್ನು ಎರಡನೆಯ ಖುಷಿ ಸುದ್ದಿಯೂ ಮೊದಲನೇ ಖುಷಿ ಸುದ್ದಿಯ ಮುಂದುವರಿದ ಭಾಗವೇ ಆಗಿದೆ. ಅದೇನೆಂದರೆ, ಪದವಿಪೂರ್ವ ಚಿತ್ರದ ಸುಂದರ ಗೀತೆಗಳಲ್ಲಿ ಒಂದಾದ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎಂಬ ಹಾಡು ಫ್ರೆಂಡ್‌ಶಿಪ್ ಡೇ ಪ್ರಯುಕ್ತ ಇದೇ ಆಗಸ್ಟ್ 06 ರಂದು ಸಂಜೆ 04:32ಕ್ಕೆ ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಯೋಗರಾಜ್ ಭಟ್ ಸಾಹಿತ್ಯವಿರುವ ಈ ಹಾಡಿಗೆ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
ಶೂಟಿಂಗ್ ಶುರುವಾದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುವಂತೆ ಮಾಡುತ್ತಿರುವ ಪದವಿಪೂರ್ವ ಚಿತ್ರ, ಸ್ನೇಹದ ಮಹತ್ವ ಸಾರುವ ತಮ್ಮ ಸಿನಿಮಾದ ಪ್ರಪ್ರಥಮ ಹಾಡನ್ನು ಫ್ರೆಂಡ್‌ಶಿಪ್ ಡೇ ಸಲುವಾಗಿ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ವಿಶೇಷ.
ಚಿತ್ರದ ನಾಯಕನಾಗಿ ಪೃಥ್ವಿ ಶಾಮನೂರು ಅಭಿನಯಿಸುತ್ತಿದ್ದು ನಾಯಕಿಯರಾಗಿ ಅಂಜಲಿ ಅನೀಶ್ ಹಾಗು ಯಶ ಶಿವಕುಮಾರ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಚಿತ್ರದ ಸಂಕಲನದ ಜವಾಬ್ಧಾರಿಯನ್ನು ಸಂಕಲನಕಾರ ಮಧು ತುಂಬಕೆರೆ ವಹಿಸಿಕೊಂಡಿದ್ದಾರೆ.