ಮೈಸೂರಿನ ಎಂ.ಡಿ.ಪಾರ್ಥಸಾರಥಿ ಅವರು ಪಾಥಿ ಫಿಲಂಸ್ ಮೂಲಕ ನಿರ್ಮಿಸಿರುವ ಮಕ್ಕಳ ಚಿತ್ರ “ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು”. ಈ ಚಿತ್ರ ಇದೇ ಹತ್ತೊಂಬತ್ತನೆಯ ತಾರೀಖು ಬಿಡುಗಡೆಯಾಗುತ್ತಿದೆ.
ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ನಾನು ಮೂಲತಃ ಮೈಸೂರಿನವನು. ಇದೊಂದು ಸತ್ಯಘಟನೆ ಆಧಾರಿತ ಚಿತ್ರ. ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ಮಕ್ಕಳನ್ನು ಅಪಹರಿಸಿ, ಅವರ ಕಿರು ನಾಲಿಗೆ ಕತ್ತರಿಸಿ ಭಿಕ್ಷೆ ಬೇಡಲು ಕಳುಹಿಸುತ್ತಿದ್ದರು. ಇದನ್ನು ಪತ್ರಿಕೆಯ ಮೂಲಕ ತಿಳಿದ ನಾನು, ನಿರ್ಮಾಪಕರ ಬಳಿ ಈ ವಿಷಯದ ಬಗ್ಗೆ ಸಿನಿಮಾ ಮಾಡೋಣ ಅಂದೆ. ಕಥೆ ಸಿದ್ದ ಮಾಡಿಕೊಳ್ಳಿ ಎಂದರು. ಯುವ ಕಥೆಗಾರ ಸುದೀಪ್ ಶರ್ಮ ಕಥೆ ಬರೆದಿದ್ದಾರೆ. ಕಳೆದವರ್ಷವೇ ಚಿತ್ರ ತೆರೆಗೆ ಬರಲು ಸಿದ್ದಾವಾಗಿತ್ತು. ಕೊರೋನ ಕಾರಣದಿಂದ ತಡವಾಯಿತು. ನಮ್ಮ ಚಿತ್ರಕ್ಕೆ 2019- 20 ನೇ ಸಾಲಿನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಬಂದಿದೆ. ಹಿರಿಯ ಕಲಾವಿದರಾದ ದತ್ತಣ್ಣ, ತಬಲನಾಣಿ, ಸಂಗೀತ, ಶಿವಾಜಿ ಯಾದವ್,ಡ್ರಾಮ ಜ್ಯೂನಿಯರ್ಸ್ ನ ಮಕ್ಕಳಾದ ಮಹೇಂದ್ರ (ಕಿಶೋರ ಪಾತ್ರಧಾರಿ), ಅಮಿತ್, ಶಶಿ ಗೌಡ, ಮಂಜುನಾಥ್, ಮಿಥಾಲಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ಪವನ್ ತೇಜ್ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಭಾರತಿ ಶಂಕರ್.
ಮೈಸೂರಿನವನಾದ ನಾನು ಅಪ್ಪಟ ವಿಷ್ಣುವರ್ಧನ್ ಅಭಿಮಾನಿ. ಈ ಹಿಂದೆ “ಸಿಂಹ ಹಾಕಿದ ಹೆಜ್ಜೆ” ಚಿತ್ರ ನಿರ್ಮಾಣ ಮಾಡಿದ್ದೆ. ಇದು ಎರಡನೇ ಚಿತ್ರ. ನಿರ್ದೇಶಕರು ಹೇಳಿದ ಕಥೆ ಹಿಡಿಸಿತು. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ಪಾರ್ಥಸಾರಥಿ.
ನನಗೆ ಎಲ್ಲಾ ಚಿತ್ರಗಳಲ್ಲಿ ಹೆಚ್ಚು ಮಾತಿರುವ ಪಾತ್ರ ಇರುತ್ತದೆ. ಇದರಲ್ಲಿ ಮಾತು ಕಡಿಮೆ. ಹೆಂಡತಿ ಹೇಳುವುದನ್ನು ಕೇಳಿಕೊಂಡಿರುವ ಗಂಡನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮಕ್ಕಳು ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರ ನೋಡಿ ಹರಸಿ ಎಂದರು ತಬಲನಾಣಿ.
ಕಿಶೋರ ಪಾತ್ರಧಾರಿ ಮಹೇಂದ್ರ, ಆತನ ಗೆಳೆಯರಾಗಿ ಅಭಿನಯಿಸಿರುವ ಅಮಿತ್, ಶಶಿಗೌಡ, ಮಿಥಾಲಿ, ಮಂಜುನಾಥ್ ಮುಂತಾದ ಮಕ್ಕಳು ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಈವರೆಗೂ ಮೂರುಸಾವಿರಕ್ಕು ಅಧಿಕ ಶಾಲೆಯ ಹಲಿಗೆಗಳಿಗೆ ಉಚಿತವಾಗಿ ಕಪ್ಪು ಬಣ್ಣ ಬಳೆದುಕೊಟ್ಟಿರುವ ಹಾಗೂ ಕರ್ನಾಟಕದ ಕೆಲವು ಊರುಗಳಲ್ಲಿ ಈ ಚಿತ್ರದ ಪ್ತಚಾರದ ಗಾಡಿ ಓಡಿಸುತ್ತಿರುವ ರಂಗಸ್ವಾಮಿ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.
ಮಂಜುಕವಿ ಸಂಗೀತ ನೀಡಿರುವ ಮೂರು ಹಾಡುಗಳ ಪ್ರದರ್ಶನ ಮಾಡಲಾಯಿತು. ಆರ್ ಕೆ ಶಿವಕುಮಾರ್ ಛಾಯಾಗ್ರಹಣ ಹಾಗೂ ಕೆಂಪರಾಜು ಅವರ ಸಂಕಲನವಿರುವ ಈ ಚಿತ್ರಕ್ಕೆ ಲೋಕೇಶ್ ಗೌಡ ಸಂಭಾಷಣೆ ಬರೆದಿದ್ದಾರೆ.