ಸ್ಯಾಂಡಲ್ ವುಡ್ ಗೆ ಹೊಸಬರ ಆಗಮನ ಹೊಸದೇನಲ್ಲ…ಪ್ರತಿ ಬಾರಿಯೂ ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾನೆ ಇರ್ತಾರೆ. ಇದೀಗ ಅದೇ ಭರವಸೆಯೊಂದಿಗೆ ಯುವ ಉತ್ಸಾಹಿ ಸಿನಿಮಾ ತಂಡವೊಂದು ಎಂಟ್ರಿ ಕೊಟ್ಟಿದೆ. ಎಂಟು ವರ್ಷಗಳ ಕಾಲ ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಕರ್ಣನ್ ಎಸ್ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಿನಿಮಾ ಧೀರ ಭಗತ್ ರಾಯ್.
ಆಕ್ಷನ್ ಪೊಲಿಟಿಕಲ್ ಡ್ರಾಮಾ ಧೀರ ಭಗತ್ ರಾಯ್ ಸಿನಿಮಾದಲ್ಲಿ ರಾಕೇಶ್ ದಳವಾಯಿ ಹೀರೋ ಆಗಿ ನಟಿಸ್ತಿದ್ದು, ಸುಚರಿತ ಸಹಾಯರಾಜ್ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಶರತ್ ಲೋಹಿತಾಶ್ವ ವಿಲನ್ ಖದರ್ ನಲ್ಲಿ ಮಿಂಚಿದ್ದಾರೆ. ಉಳಿದಂತೆ
ಪ್ರವೀಣ್ ಎಚ್.ಸಿ, ತ್ರಿವಿಕ್ರಮ್, ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ ಗೋವಿಂದ್, ಶಶಿಕುಮಾರ್, ಫಾರೂಕ್ ಅಹ್ಮದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಧೀರ ಭಗತ್ ರಾಯ್ ಟೀಸರ್
ಧೀರ ಭಗತ್ ರಾಯ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಆಗಿದೆ. ಅಧಿಕಾರಕ್ಕಾಗಿ ನಡೆಯುವ ಹೋರಾಟ, ಪ್ರೀತಿ-ಮಮತೆಯ ಸುತ್ತನಡೆಯುವ ಬಾಂಧವ್ಯದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಪ್ರತಿ ಪಾತ್ರಗಳ ಅಮೋಘ ಅಭಿನಯ ನೋಡುಗರ ಮನಮುಟ್ಟುತ್ತದೆ.
ಶ್ರೀ ಓಂ ಸಿನಿ ಎಂಟರ್ಟೈನರ್ಸ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಧೀರ ಭಗತ್ ರಾಯ್ ಸಿನಿಮಾಗೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ವಿಶ್ವ ಎನ್ ಎಂ ಸಂಕಲನ, ಎಂ ಸೆಲ್ವಂ ಜಾನ್ ಛಾಯಾಗ್ರಹಣ, ಕರಿಯಪ್ಪ ಎಸ್ ಪಾಲವ್ವನ ಹಳ್ಳಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಈಗಾಗಲೇ ಶೇಖಡ 60ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.