ಕೊರೋನ ಹಾವಳಿ ಕಡಿಮೆಯಾದ ಮೇಲೆ ಕನ್ನಡ ಚಿತ್ರರಂಗ ಮೊದಲಿನಂತೆ ತನ್ನ ವೈಭವಕ್ಕೆ ಮರಳುತ್ತಿದೆ. ಸಾಲುಸಾಲು ಚಿತ್ರಗಳು ತೆರೆಗೆ ಬರುತ್ತಿದೆ.
ಆ ಪೈಕಿ ವಿಭಿನ್ನ ಕಥೆಯ “ತ್ರಿಕೋನ” ಸಹ ಏಪ್ರಿಲ್ ಒಂದರಂದು ಬಿಡುಗಡೆಯಾಗಲಿದೆ.
ಈ ವಿಷಯ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ನಿರ್ಮಾಣ ಮಾಡಿರುವ ರಾಜಶೇಖರ್ ಅವರೆ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. 143 ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಾಂತ್ “ತ್ರಿಕೋನ” ವನ್ನು ನಿರ್ದೇಶಿಸಿದ್ದಾರೆ.
ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. ಆ ಮನಸ್ಸನ್ನು ನಾವು ಕ್ರೀಡಾ ಮೈದಾನ ಎನ್ನಬಹುದು. ಏಕೆಂದರೆ ಮನಸ್ಸಿನಲ್ಲಿ ಮೋಸ, ದ್ವೇಷ, ಅಸೂಯೆ, ಸೇಡು, ದುರಾಸೆ ಎಂಬ ಕ್ರೀಡೆಗಳು ನಡೆಯುತ್ತಿರುತ್ತದೆ. ಇದರಲ್ಲಿ ಅಹಂ, ಶಕ್ತಿ ಹಾಗೂ ತಾಳ್ಮೆ ಎಂಬ ಸ್ಪರ್ಧಿಗಳು ಇದ್ದಾರೆ. ಈ ಮೂವರಲ್ಲಿ ಗೆಲವು ಯಾರಿಗೆ? ಎಂದು ನೋಡಲು ನೀವು ನಮ್ಮ ಸಿನಿಮಾ ನೋಡಬೇಕು ಎಂದರು ನಿರ್ದೇಶಕರು.
ನಾನು ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ನಿರ್ದೇಶನವನ್ನು ಚಂದ್ರಕಾಂತ್ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಕಥೆ ನಾನೇ ಬರೆದಿದ್ದೇನೆ. ಬೇರೆ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದು, ಬೇರೆ ನಿರ್ದೇಶಕರೆ ಚಿತ್ರ ನಿರ್ದೇಶಿಸಲಿದ್ದಾರೆ. ಏಕೆಂದರೆ ಚಂದ್ರಕಾಂತ್ ಸೇರಿದಂತೆ ಬೇರೆ ನಿರ್ದೇಶಕರಿಂದ ನಾನು ತಿಳಿಯುವುದಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಏಪ್ರಿಲ್ ಒಂದರಂದು ಬಿಡುಗಡೆಯಾಗಲಿದೆ. ಪ್ರಚಾರ ರಾಯಭಾರಿಯಾಗಿ ಖ್ಯಾತ ನಟ ಸುಚೀಂದ್ರ ಪ್ರಸಾದ್ ಅವರಿರುತ್ತಾರೆ. ವಿತರಕ ಭಾಷಾ ಅವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದರು ನಿರ್ಮಾಪಕ ರಾಜಶೇಖರ್.
ತಮ್ಮ ಪಾತ್ರ ವಿವರಣೆ ನೀಡಿದ ಖ್ಯಾತ ನಟ ಸುರೇಶ್ ಹೆಬ್ಳೀಕರ್, ಚಿತ್ರತಂಡಕ್ಕೆ ಶುಭ ಕೋರಿದರು.
ವಿತರಕ ಭಾಷಾ ಸಿನಿಮಾ ವಿತರಣೆ ಬಗ್ಗೆ ಮಾಹಿತಿ ನೀಡಿದರು.
ನಾನು ಹಾಗೂ ನಿರ್ಮಾಪಕ ರಾಜಶೇಖರ್ ಸಹಪಾಠಿಗಳು. ತ್ರಿಕೋನ ಚಿತ್ರದ ರಾಯಭಾರಿಯಾಗಲು ಕೇಳಿದರು.
ಚಿತ್ರ ನೋಡಿದೆ. ಚೆನ್ನಾಗಿದೆ. ರಾಯಭಾರಿಯಾಗಲು ಒಪ್ಪಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಸುಚೀಂದ್ರ ಪ್ರಸಾದ್.
ಚಿತ್ರದಲ್ಲಿ ನಟಿಸಿರುವ ರಾಜವೀರ್ ಹಾಗೂ ಮಾರುತೇಶ್ ಪಾತ್ರ ಪರಿಚಯ ಮಾಡಿಕೊಟ್ಟರು.
ಪೊಲೀಸ್ ಪ್ರಕಿ ಪ್ರೊಡಕ್ಷನ್ ಲಾಂಛನದಲ್ಲಿ ರಾಜಶೇಖರ್ ನಿರ್ಮಿಸಿರುವ ಈ ಚಿತ್ರವನ್ನು ಚಂದ್ರಕಾಂತ್ ನಿರ್ದೇಶಿಸಿದ್ದಾರೆ. ಸುರೇಂದ್ರನಾಥ್ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಾರುತೇಶ್, ರಾಜವೀರ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್, ರಾಕ್ ಲೈನ್ ಸುಧಾಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.