HomeNewsಕಾಡುವ ಕುನ್ನ, ಕಾಡುವ ಕಾಡು!

ಕಾಡುವ ಕುನ್ನ, ಕಾಡುವ ಕಾಡು!

‘ತಲೆದಂಡ’ ಕನ್ನಡ ಚಿತ್ರ ಈಗ ಬಿಡುಗಡೆಯಾಗಿದೆ. ಇದು ಸಂಚಾರಿ ವಿಜಯ್ ಅವರ ನಟನೆಯ ಚಿತ್ರ. ಈ ಚಿತ್ರ ವಿಜಯ್ ಅವರ ನಟನಾ ಪ್ರತಿಭೆಗೆ ಕನ್ನಡಿಯಂತಿದೆ. ಈ ಹಿಂದೆ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಈ ನಟ ಅದನ್ನು ಮತ್ತೆ ಈ ಚಿತ್ರದ ಮೂಲಕ ಸಾಬೀತು ಪಡಿಸಿದ್ದಾರೆ ಎನ್ನಲ್ಲಡ್ಡಿಯಿಲ್ಲ!

ಸೋಲಿಗರ ಬದುಕಿನ ಎಳೆಯೊಂದಿಗೆ ಹಚ್ಚ ಹಸಿರಿನ ಕಾಡಿನ ಪರಿಸರದ ಹಳ್ಳಿಯಲ್ಲಿ ನಡೆವ ಕತೆಯು ಇದಾಗಿದೆ. ಆ ಪರಿಸರದ ಹಾಗೂ ಆ ಪಂಗಡದವರ ಭಾಷಾ ವೈಖರಿಯಲ್ಲಿಯೇ ಇಡೀ ಚಿತ್ರ ತೆರೆಗೆ ತರಲಾಗಿದೆ.

ಇಲ್ಲಿ ಕತೆಯೇ ಮುಖ್ಯ, ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ! ಎಂಬಂತೆ ಪ್ರತಿ ಫ್ರೇಮೂ ಕತೆಗೆ ಪೂರಕವಾಗಿದೆ.

ಯಾವುದಕ್ಕೂ ಹೆಚ್ಚು ಪ್ರಾಧಾನ್ಯತೆ ಕೊಡದೇ ಯಾವುದನ್ನು ಉಪೇಕ್ಷಿಸದೇ ಬಿಗಿಯಾಗಿ ಚಿತ್ರಿಸಿಕೊಟ್ಟಿದ್ದಾರೆ. ಬಿಗಿಯಾದ ಚಿತ್ರಕತೆ, ಅಚ್ಚುಕಟ್ಟಾದ ದೃಶ್ಯೀಕರಣ, ಪ್ರತಿ ಶಾಟೂ ಮನಕ್ಕೆ ಮುಟ್ಟುವಂತೆ ಸೆರೆ ಹಿಡಿಯಲಾಗಿದೆ.

ನಿರ್ಮಾಪಕಿ ಡಾ ಹೇಮಾಮಾಲಿನಿ ಕೃಪಾಕರ್ ಅವರು ಉತ್ತಮ ಸಂದೇಶದ ಚಿತ್ರ ಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉಸಿರಿನ ಬೆಲೆಯನ್ನು ತಿಳಿದ ಮನುಜ ಕುಲಕ್ಕಿದು ನೀತಿ ಪಾಠದಂತಿದ್ದು ಪ್ರಸ್ತುತಕ್ಕೆ ಹತ್ತಿರವಾಗಿದೆ.

ನಿರ್ದೇಶಕ ಪ್ರವೀಣ್ ಕೃಪಾಕರ್ ಅವರ ಆಲೋಚನೆ ಹಾಗೂ ಸೀನ್ ಕ್ರಿಯೇಶನ್ ಅದ್ಭುತ. ಅದಕ್ಕೆ ತಕ್ಕಂತೆ ಸಿನಿಮೋಟೋಗ್ರಫಿ ಮಾಡಿದ ಅಶೋಕ್ ಕಶ್ಯಪ್ ಅವರ ಚೌಕಟ್ಟು ಚಿತ್ರವನ್ನು ಕಲಾಕೃತಿಯಾಗಿಸಿದೆ.

ನಿಸರ್ಗವನ್ನು ಯಥಾವತ್ತಾಗಿ ತೋರಿಸುವ ಮೂಲಕ ಅದರ ಅಂದವನ್ನು ಅಶೋಕ್ ಹೆಚ್ಚಿಸಿದ್ದಾರೆ. ಸಿನಿಮಾಗೆ ಬೇಕಾದ ತಂತ್ರಜ್ಞಾನವನ್ನು ಎಷ್ಟು ಬೇಕೋ ಅಷ್ಡೇ ಬಳಸಿದ್ದಾರೆ. ಆಶೋಕ್ ಕಶ್ಯಪ್ ಅವರ ಇಂತಹ ಕ್ಯಾಮರಾ ಕುಸುರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ. ಅಲ್ಲದೇ ಚಿತ್ರಕ್ಕೆ ಹಲವು ಪ್ರತಿಷ್ಟಿತ ಪ್ರಶಸ್ತಿಗಳು ಲಭಿಸಿವೆ.

ಕನ್ನಡದ ವಿಭಿನ್ನ ಚಿತ್ರಗಳ ಪಟ್ಟಿಗೆ ಇದು ಸೇಪರ್ಡೆಯಾಗಿದೆ!
ಆದರೆ ಕನ್ನಡ ಪ್ರೇಕ್ಷಕ ಪ್ರಭುಗಳು ಈ ಚಿತ್ರವನ್ನು ನೋಡಿ ಮೆಚ್ಚಿದಲ್ಲಿ ತಂಡದ ಶ್ರಮ ಸಾರ್ಥಕ, ಅದೇ ಬಹು ದೊಡ್ಡ ಪ್ರಶಸ್ತಿ!

ಮಿಂಚುಹುಳಗಳೊಂದಿಗೆ ಆಡುವ ದೃಶ್ಯವು ಅಷ್ಟೇ ಸಹಜವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಗುಣವನ್ನು ಹೊಂದಿರುವುದು ಸಾಬೀತಾಗಿದೆ.

ಕುನ್ನನನ್ನು ಎಲ್ಲೆಡೆ ಹುಡುಕಿ ಕಾಣದಾಗಿ ತನ್ನ ಗುಡಿಸಲ ಮುಂದೆ ಕೂತು ಕಾಯುವಾಗ ಅಲ್ಲಿಗೆ ಕುನ್ನನ ಆಗಮನ! ಈ ದೃಶ್ಯದ ಸಂಯೋಜನೆ, ಬೆಳಕಿನ ವಿನ್ಯಾಸ, ಮನಸ್ಸಿಗೆ ಹತ್ತಿರವಾಗುವ ವಿಕಲಚೇತನನ ನಡವಳಿಕೆ, ಅಮ್ಮನ ಪ್ರೀತಿಯ ಪರಾಕಾಷ್ಟೇ ಅಲ್ಲಿನ ನಡಾವಳಿಗಳು ಕಣ್ತುಂಬುತ್ತೆ!

ಈಗಿನ ಸಿನಿಮಾ ಜಗತ್ತಿನ ಮಟ್ಟದಲ್ಲೇ ನಾವೂ ಇದ್ದೀವಿ ಎಂದು ಸಾಬೀತು ಪಡಿಸುವ ಇಂತಹ ಹಲವು ದೃಶ್ಯಗಳು ಇದರಲ್ಲಿವೆ.

ತನ್ನ ಸಾಕಿಯನ್ನು ನೆನೆದೂ, ತನ್ನಿಷ್ಟದ ಮರಗಳ ಕಡಿಯುವವರ ನೆನೆದೂ, ತನ್ನ ಮರಕ್ಕೆ ಗಾಯವಾದಾಗ ಅದಕ್ಕೆ ಶುಶ್ರೂಷೆ ಮಾಡುವ, ನಾಳೆ ಉರುಳಿ ಬೀಳಲಿರುವ ಮರವ ಅಪ್ಪಿ ಮಮ್ಮಲ ಮರುಗುವ, ಊರವರೆಲ್ಲಾ ಡಾಂಬಾರು ರಸ್ತೆಗಾಗಿ ಮರಗಳ ನಾಶಕ್ಕೆ ಒಪ್ಪಿಗೆ ಕೊಡುವಾಗ ಒಬ್ಬನೇ ಕೂತು ಬಿಕ್ಕುವ ದೃಶ್ಯಗಳಿಗೆ ‘ಸೈ’ ಅನ್ನಬೇಕೋ, ದುಃಖಿಸಬೇಕೋ ಆನಂದ ಭಾಷ್ಪ ಸುರಿಸಬೇಕೋ ತಿಳಿಯದು. ದುಃಖದ ಮಡುವಲ್ಲಿ ತಾವರೆಗಳು ಉದಿಸಿವೆ!

ಸಂಭಾಷಣೆಯು ಈ ಚಿತ್ರಕ್ಕೆ ಹೆಚ್ಚಿನ ಮೆರುಗು ಕೊಟ್ಟಿದೆ. ಪರಿಸರಕ್ಕೆ ತಕ್ಕ ಮಣ್ಣಿನ ವಾಸನೆಯ ಭಾಷೆಯ ಸೊಗಡು ಬೇರೆಯದೇ ಲೋಕ ಸೃಷ್ಟಿಸುತ್ತೆ!

ಪ್ರತಿ ಸಂಭಾಷಣೆಯಲ್ಲೂ ಹೊಸ ಹೊಸ ಪದಗಳ ಪರಿಚಯವಾಗುತ್ತೆ. ಉಚ್ಚಾರಣೆ ನಾಲಗೆಯ ಹೊರಳು, ವೈವಿಧ್ಯಮಯ ನಿನಾದ. ಏರಿಳಿತದ ಮಾತುಗಳು ಮನಸ್ಸಿಗೆ ನಾಟುತ್ತೆ. ಕರುಳಿಂದ ನೋವು-ಸಂಕಟವು ಒತ್ತರಿಸಿ ಬರುತ್ತೆ. ಒಮ್ಮೆ ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೇ ಕಾಡು ಕಾಡುತ್ತೆ!

ಹೀಗೆ ಕಾಡುವ ಈ ಚಿತ್ರವು ಸಂಕಲನಕಾರರಾದ ಕೆಂಪರಾಜ್ ಅವರಿಗೆ ಇನ್ನೆಷ್ಟು ಕಾಡಿರಬೇಕು. ಇಷ್ಟು ಉತ್ತಮವಾದ ಅಭಿನಯದ ಓಘಕ್ಕೆ, ನೋವು, ಪ್ರೀತಿ-ಪ್ರೇಮಗಳಿಗೆ ಕತ್ತರಿ ಹಾಕಬೇಕು. ಆರ್ದ್ರಗೊಳಿಸುವ ದೃಶ್ಯಗಳನ್ನು ಪದೇ ಪದೇ ನೋಡಿ ಮರುಗದೇ, ಕೊರಗದೇ ಅಂಟಿಸಬೇಕು.

ಹರಿಕಾವ್ಯ ಅವರು ಸಂಗೀತದ ಮೂಲಕ ನಾಡಿನ ಸಂಸ್ಕೃತಿಗೆ, ಕಾಡಿನ ಪರಿಸರಕ್ಕೆ ತಕ್ಕ ನ್ಯಾಯ ಒದಗಿಸಬೇಕು. ಹೀಗೆ ಎಲ್ಲರೂ ಸೇರಿ ಸಮಾನ ಮನಸ್ಥಿತಿಯಿಂದ ಒಂದು ಅಮೂಲ್ಯವಾದ ಕಲಾಕೃತಿಯನ್ನು ಸಿದ್ಧಗೊಳಿಸಿದ್ದಾರೆ ಈ ಚಿತ್ರ ತಂಡ!

ನೋಡದವರಿಗೆ ಈ ಅನುಭವವು ಇಲ್ಲವಷ್ಟೇ! ಮೂಕನು ಬೆಲ್ಲವ ತಿಂದಾನು, ಸವಿದಾನು ಹೇಳಲಾಗುವುದೇನು! ಮೆದ್ದು ಅನುಭವಿಸಿದವನಿಗಷ್ಟೇ ಅರಿವಾಗುವುದು ಆ ಸವಿ!

ಸಂಚಾರಿ ವಿಜಯ್ ಬಗ್ಗೆ ಗೊತ್ತಿರದವರೂ ಈ ಚಿತ್ರದ ಕುನ್ನನ ಪಾತ್ರ ನೋಡಿದಲ್ಲಿ ಮರುಗುವುದು ಸಹಜ. ವಿಜಯ್ ಪಾತ್ರದ ಪರಕಾಯ ಪ್ರವೇಶವು ಅಂತಹ ಗಾಢವಾದ ನೋವನ್ನು ಉಂಟು ಮಾಡುತ್ತೆ. ಉಗ್ಗುವ ರೀತಿಯ ಡೈಲಾಗ್ ಡೆಲಿವರಿಯು ನಟನೆಯಷ್ಟೇ ವಿಶೇಷವೂ ವಿಭಿನ್ನವೂ ಆಗಿದೆ. ಈ ಕುನ್ನನ ಪಾತ್ರವು ಮೈಸೂರಿನ ನಾಗು ಎಂಬ ವ್ಯಕ್ತಿಯನ್ನು ನೋಡಿ ಸೃಷ್ಟಿಸಲಾಗಿದೆ. ಆದರೆ ಒಬ್ಬ ವಿಕಲಚೇತನನ ಪಾತ್ರವನ್ನು ಎಲ್ಲೂ ಏರುಪೇರಾದಂತೆ ಅನುಸರಿಸಿ ನಟಿಸುವುದು ಸುಲಭದ ಮಾತೇ? ಕುನ್ನನಷ್ಟೇ ಉತ್ತಮವಾಗಿ ಕುನ್ನನ ಅಮ್ಮ ಕೇತಮ್ಮನಾಗಿ ಮಂಗಳಾ ರಘು ಅವರು ಜೀವಿಸಿ ನಟಿಸಿದ್ಧಾರೆ. ಈವರೆಗೂ ಮುರ್ನಾಲ್ಕು ಚಿತ್ರಗಳಲ್ಲಷ್ಟೇ ನಟಿಸಿರುವ ಮಂಗಳಾ ಅವರು ಕುನ್ನನ ನಟನೆಗೆ ಸಾಥ್ ಕೊಟ್ಟು ತಾವೊಬ್ಬ ಅಭಿನೇತ್ರಿ ಎಂದು ಸಾಬೀತುಗೊಳಿಸಿದ್ದಾರೆ. ಇಲ್ಲಿ ಇಬ್ಬರೂ ಪೈಪೋಟಿಯೋ ಎಂಬಂತೆ ನಟಿಸಿ ಚಿತ್ರಕ್ಕೆ ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆ.

ಬಿ ಸುರೇಶ್, ರಮೇಶ್ ಪಂಡಿತ್, ಭವಾನಿ ಪ್ರಕಾಶ್, ಮಂಡ್ಯ ರಮೇಶ್ ಹೀಗೆ ರಂಗಭೂಮಿಯ ಪ್ರತಿಭೆಗಳೇ ಹೆಚ್ಚಿದ್ದು ಒಬ್ಬರಿಗಿಂತ ಒಬ್ಬರು ಜಿದ್ದಿಗೆ ಬಿದ್ದು ನಟಿಸಿದ್ದಾರೆ. ಚೈತ್ರಾ ಆಚಾರ್ ಸಾಕಿ ಪಾತ್ರದ ಮೂಲಕ ಕನ್ನಡಕ್ಕೆ ಹೊಸ ತಾರಾಮಣಿ ಆಗುವ ಭರವಸೆ ಕೊಟ್ಟಿದ್ದಾರೆ.

ಕಾಡು ಉಳಿಸಿ, ಮರ ನೆಡಿ ಪರಿಸರ ಸಂರಕ್ಷಿಸಿ ಎಂಬ ಸಂದೇಶ ಸಾರುವ ಬೀದಿ ನಾಟಕದ ದೃಶ್ಯ ಸಂಯೋಜನೆಯು ಮುಗ್ಧ ಕುನ್ನನ ಮೇಲೆ ಪರಿಣಾಮ ಬೀರಿದ್ದು ಅಲ್ಲಿ ಹಸಿರುಟ್ಟ ಸ್ತ್ರೀ ಪಾತ್ರಧಾರಿ ಸಾಕಿಯಾಗಿದ್ದೂ, ಭೂ ದೇವಿಯಂತೆ ಕಂಡಿದ್ದೂ ಚಿತ್ರಕ್ಕೆ ಹೊಸ ತಿರುವು ಕೊಟ್ಟಿದೆ. ‘ವಾಡು ವಾಡು ವಾಡೂ ಇವರೆಲ್ಲಾ ಹೊಡಿತಾರೆ ವಾಡು ವಾಡೂ ಸಾಕಿ ವಾಡು ವಾಡೂ’ ಎಂಬುದು ಚಿತ್ರಮಂದಿರದಿಂದ ಹೊರಬಂದರೂ ಕಾಡುತ್ತೆ! ಬೀದಿನಾಟಕವನ್ಬು ಕತೆಗೆ ಬಳಸಿಕೊಂಡ ರೀತಿ ಭಿನ್ನವಾಗಿದೆ. ಎರಡು ವೇರೆ ಬೇರೆ ಪಾತ್ರಗಳನ್ನು ಒಂದೇ‌ ಪಾತ್ರವಾಗಿಸುವ ಪರಿ ವಿಕಲಚೇತನನ ಪಾತ್ರದ ಮನಸ್ಥಿತಿಗೆ ಪೂರಕವಾಗಿಸಿದೆ.

ಗೋರಕಾನ ಗೋರಕಾನ ಹಾಡಿನಂತಹ ಹಾಡುಗಳು ಗುನುಗುವಂತೆ ಮಾಡಿವೆ. ಅಟ್ಟಿ ಲಕ್ಕವ್ವ ಹಾಗೂ ಬಿಳಿಗಿರಿ ರಂಗನ ನಂಬಿದ ಜನರ ನಂಬಿಕೆಯನ್ನೂ, ಸಂಪ್ರದಾಯವನ್ನೂ ಕತೆಗೆ ತಕ್ಕಂತೆ ತರಲಾಗಿದೆ. ಜನಪದ ಸಂಸ್ಕೃತಿಯನ್ನು ಯಥಾವತ್ತಾಗಿ ಪ್ರತಿಬಿಂಬಿಸಲಾಗಿದೆ.

ಇದೆಲ್ಲವನ್ನೂ ಮೀರಿದ್ದು ಎನ್ನಬಹುದಾದ ಹಸಿರೇ ಉಸಿರು, ಮರ ಕಡಿದರೆ ಮಳೆಬಾರದು ನೀರಿಗೆ ಬರ ಬರುವುದು, ಉಸಿರಾಡಲು ಶುದ್ದ ಗಾಳಿ ಸಿಗದು, ಪ್ರತಿ ಗಿಡ-ಮರಗಳಿಗೂ ಜೀವವಿದೆ. ಅವುಗಳಿಗೆ ನೋವಾಗಲು, ಕಡಿಯಲು ಎಡೆಕೊಡಬಾರದು ಎಂಬ ಸಂದೇಶವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಮರ ಸಂರಕ್ಷಿಸಿ, ಗಿಡ ನೆಡಿ ಹಾಗೂ ಬೆಳೆಸಿ, ಕಾಡು ಉಳಿಸಿ ಎಂಬ ಧ್ಯೇಯೋಕ್ತಿಯನ್ನು ಇಷ್ಟು ಪ್ರಮುಖ ವಿಷಯವನ್ನಾಗಿ ಚಿತ್ರದಲ್ಲಿ ಬಳಸಿಕೊಂಡದ್ದು ಅಪರೂಪ ಎನ್ನಬಹುದೇನೋ?

ಈ ಚಿತ್ರ ನೋಡಿ ಚಿತ್ರಮಂದಿರದಿಂದ ಹೊರ ಬಂದರೂ ಕುನ್ನ, ಕೇತವ್ವ, ಕುನ್ನನ ಅಪ್ಪಯ್ಯ, ಸಾಕಿ, ಪರಿಸರ ತಜ್ಞ, ಮಿನಿಸ್ಟ್ರು ಹೀಗೆ ಎಲ್ಲಾ ಪಾತ್ರಗಳೂ ನಮ್ಮ ತಲೆಯಲ್ಲೇ ಬೇರು ಬಿಟ್ಟು ತಳ ಊರಿರುತ್ವೆ!

ಒಬ್ಬ ವಿಕಲಚೇತನಿಗಿರುವ ಪರಿಸರ ಕಾಳಜಿ ಕಾಡಿನ ಬಗ್ಗೆ ಇರುವ ಮುಗ್ಧ ಪ್ರೇಮ ಹಾಗೂ ಅದಕ್ಕಾಗಿ ತಲೆದಂಡ ಎಲ್ಲವೂ ಆಳೆತ್ತದವರನ್ನು ಸಣ್ಣಗೆ ನಡುಗಿಸಿ ಬಿಡುತ್ತೆ, ಗೊತ್ತೇ ಆಗದಂತೆ ಕಣ್ಣಾಲಿಯಲಿ ದುಃಖವು ಮಡುಗಟ್ಟುತ್ತೆ. ಆ ಪಾತ್ರದ ಬಗ್ಗೆ ಮರುಕ ಪಡುವಂತೆ ಮಾಡುತ್ತೆ.
ಜೀವಿಸಿ ನಟಿಸಿದ ವಿಜಯ್ ಜೀವಂತ ಇದ್ದಾರೆ!

ಎಷ್ಟೇ ಪ್ರಯತ್ನಪಟ್ಟರೂ ಕೊನೆಯ ಸೀನ್ ವರೆಗೂ ಸಂಚಾರಿ ವಿಜಯ್ ನಮಗೆ ಕಾಣಲೇ ಇಲ್ಲಾ. ಕುನ್ನನನ್ನು ಮಾತ್ರ ನೋಡಲಾಯ್ತು! ಪಾತ್ರವೇ ಆಗಿದ್ದಾರೆ ವಿಜಯ್

-ಸಂಕೇತದತ್ತ!

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap