HomeNewsಕ್ರೇಜಿ಼ಸ್ಟಾರ್ ಹುಟ್ಟುಹಬ್ಬಕ್ಕೆ ಬಂತು 'ತ್ರಿವಿಕ್ರಮ' ಹಾಡು

ಕ್ರೇಜಿ಼ಸ್ಟಾರ್ ಹುಟ್ಟುಹಬ್ಬಕ್ಕೆ ಬಂತು ‘ತ್ರಿವಿಕ್ರಮ’ ಹಾಡು

ಮಮ್ಮಿ ಸಾಂಗ್ ರಿಲೀಸ್ ಮಾಡಿದ ಸೆಂಚುರಿ ಸ್ಟಾರ್‌

ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸಿರುವ ‘ತ್ರಿವಿಕ್ರಮ’ ಜೂನ್ 24ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ವಿಕ್ಕಿ ನಾಯಕ ನಟನಾಗಿ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಪ್ರಾರಂಭದಿಂದಲೂ ಈ ಚಿತ್ರಕ್ಕೆ ಚಂದನವನದ ತಾರೆಯರು ಸಾಥ್ ನೀಡಿದ್ದಾರೆ. ಇದೀಗ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್ ಸಹ ‘ತ್ರಿವಿಕ್ರಮ’ನಿಗೆ ಸಾಥ್ ನೀಡಿದ್ದಾರೆ.

ಮೇ 30ರಂದು ಕ್ರೇಜಿ಼ಸ್ಟಾರ್ ಹುಟ್ಟುಹಬ್ಬ. ಅದರ ಅಂಗವಾಗಿ ‘ತ್ರಿವಿಕ್ರಮ’ ತಂಡದಿಂದ ‘ಪ್ಲೀಸ್ ಮಮ್ಮಿ’ ವೀಡಿಯೋ ಸಾಂಗ್ ಹರಿಬಿಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ರವಿ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. ಆಗಿನಿಂದಲೂ ಒಳ್ಳೆಯ ಸ್ನೇಹಿತರು. ಈಗಾಗಲೇ ಮನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಹೀರೋ ಆಗಿ ವಿಕ್ಕಿ ಲಾಂಚ್ ಆಗ್ತಿರೋದು ಖುಷಿಯ ವಿಚಾರ. ಬಾಲನಟನಾಗಿ ವಿಕ್ಕಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡ ಅನುಭವವಿದೆ. ನನ್ನದೇ ನಟನೆಯ ಸಿನಿಮಾದಲ್ಲಿ ನನ್ನ ಚಿಕ್ಕ ವಯಸ್ಸಿನ ಪಾತ್ರ ನಿಭಾಯಿಸಿದ್ದಾರೆ. ಈಗ ನಾಯಕನಾಗಿರೋದಕ್ಕೆ ಖುಷಿ ಆಗ್ತಿದೆ. ನಾನು ಹಾಡು ಹಾಗೂ ಕೆಲವು ಸೀನ್ ನೋಡಿದ್ದೀನಿ. ವಿಕ್ಕಿ ಪಕ್ಕಾ ಮಾಸ್ ಲುಕ್ ಮತ್ತು ಚಾರ್ಮ್ ಇರುವಂಥ ನಟ. ‘ತ್ರಿವಿಕ್ರಮ’ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಲಿ’ ಎಂದು ಶಿವಣ್ಣ ಹಾರೈಸಿದ್ದಾರೆ.

ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ನಿರ್ದೇಶನ ಮಾಡಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’ ಹಾಡು ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್’ನಲ್ಲಿ ಮನೆ ಮಾಡಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಕಾಶ್ ಹಾಡಿದ್ದಾರೆ.

ವಿಕ್ಕಿಗೆ ಜೋಡಿಯಾಗಿ ಆಕಾಂಕ್ಷಾ ಶರ್ಮಾ ಇದ್ದಾರೆ. ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.

Must Read

spot_img
Share via
Copy link
Powered by Social Snap