ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನ.
ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಕಾಲ ಎನ್ನಬಹುದು. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಚಿತ್ರರಸಿಕರು ಒಪ್ಪಿಕೊಂಡು, ಯಶಸ್ವಿಗೊಳಿಸಿದ್ದಾರೆ. ಅಂತಹುದೇ ವಿಭಿನ್ನ ಕಥೆಯ “ಇನಾಮ್ದಾರ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೀಸರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್” ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆ. “ಇನಾಮ್ದಾರ್” ಚಿತ್ರಕ್ಕೆ “ಕಪ್ಪು ಸುಂದರಿಯ ಸುತ್ತ” ಎಂಬ ಅಡಿಬರಹವಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಬೆಳಗಾವಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಡಬ್ಬಿಂಗ್ ಸಹ ಪೂರ್ಣವಾಗಿದೆ. ಚಿತ್ರ ಹೇಗೆ ಬಂದಿದೆ ಎಂದು ಟೀಸರ್ ಮೂಲಕ ತೋರಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ. ನನ್ನ ಕನಸಿಗೆ ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ತಾವು ಕೂಡ ಒಂದು ಪಾತ್ರ ಮಾಡಿರುವುದಾಗಿ ಹೇಳಿದರು.
ನನ್ನದು ಈ ಚಿತ್ರದಲ್ಲಿ ಕಾಡಿನ ನಾಯಕನ ಪಾತ್ರ. ತುಂಡು ಉಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ. ಬಣ್ಣ ಹಾಕಲು ಎರಡು ಗಂಟೆ ಹಿಡಿಸಿದರೆ, ತೆಗೆಯಲು ಐದು ಗಂಟೆ ಹಿಡಿಸುತ್ತಿತ್ತು ಎಂದು ಚಿತ್ರೀಕರಣದ ಅನುಭವವನ್ನು ಪ್ರಮೋದ್ ಶೆಟ್ಟಿ ಹಂಚಿಕೊಂಡರು.
ಅಭಿನಯದ ಅನುಭವವಿಲ್ಲದ ನನಗೆ ಅಭಿನಯ ಹೇಳಿಕೊಟ್ಟವರು ನಿರ್ದೇಶಕರು. ನನ್ನ ಅಭಿನಯ ಚೆನ್ನಾಗಿ ಬಂದಿದ್ದರೆ, ಅದಕ್ಕೆ ನಿರ್ದೇಶಕರೆ ಕಾರಣ ಎಂದರು ನಿರಂಜನ್ ಛತ್ರಪತಿ.
ನಿರ್ದೇಶಕ ಸಂದೇಶ್ ನನ್ನ ಆತ್ಮೀಯ ಸ್ನೇಹಿತ. ಚಿತ್ರದ ಟೀಸರ್ ನೋಡಿ ಖುಷಿಯಾಗಿದೆ. ಚಿತ್ರ ಕೂಡ ಚೆನ್ನಾಗಿ ಬಂದಿರುತ್ತದೆ ಎಂಬ ಭರವಸೆ ಮೂಡಿದೆ ಎಂದರು ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು.
ನಾಯಕಿಯರಾದ ಚಿರಶ್ರೀ ಅಂಚಿನ್, ಎಸ್ತರ್ ನರೋನ್ಹಾ, ಚಿತ್ರದಲ್ಲಿ ನಟಿಸಿರುವ ಎಂ.ಕೆ.ಮಠ, ರಘು ಪಾಂಡೇಶ್ವರ ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ರಾಕಿ ಸೋನು, ಛಾಯಾಗ್ರಾಹಕ ಮುರಳಿ, ಸಂಕಲನಕಾರ ಶಿವರಾಜ್ ಮೇಹು ಹಾಗೂ ನೃತ್ಯ ನಿರ್ದೇಶಕಿ ಗೀತಾ ಸಾಯಿ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು.